ನಗರಗಳ ಮೇಲ್ದರ್ಜೆಯ      ಮಾರುಕಟ್ಟೆಗಳಲ್ಲಿ ಅಥವಾ ಐಸ್ಕ್ರೀಮ್ ( ಕನ್ನಡದಲ್ಲಿ ‘ಮಂಜುಕೆನೆ’ ಎಂಬ ಸಂವಾದಿ ಪದ ಇದೆ ಐಸ್ಕ್ರೀಮ್ ಗೆ. ಆದರೆ ಐಸ್ಕ್ರೀಮ್ ಪದವು ಕನ್ನಡದ್ದೇ ಎಂಬಷ್ಟು ಜನಪ್ರಿಯ ಆಗಿದೆ, ಹೀಗಾಗಿ ಅದೇ ಬಳಕೆಯಲ್ಲಿದೆ.) ಅಂಗಡಿಗಳಲ್ಲಿ  ಲಿಚೀ ( Lychee) ಎಂಬ ಹಣ್ಣನ್ನು ಅಥವಾ ಅದರ ತಿರುಳನ್ನು ನಾವು ನೋಡಬಹುದು/ ಅದರ ಹೆಸರನ್ಬು ಕೇಳಬಹುದು. ಮಕ್ಕಳು ಆಡುವ ಗೋಲಿಗಿಂತ ತುಸುವೇ ದೊಡ್ಡದಿರುವ ಹಣ್ಣು ಇದು ;ಒರಟಾದ ಕೆಂಪು ಸಿಪ್ಪೆ ಹೊಂದಿದ್ದು ಅದನ್ನು ಸುಲಿದರೆ ಬಿಳಿಯಾದ, ರುಚಿಯಾದ ರಸಮಯ ತಿರುಳು ಮತ್ತು ಆ ತಿರುಳಿನ ನಡುವೆ ಕಡುಗಪ್ಪು ಬೀಜ ಸಿಗುತ್ತವೆ. ಏಷ್ಯಾ ಖಂಡವು ಈ ಹಣ್ಣಿನ ತವರು. ಚೈನೀಸ್ ಭಾಷೆಯ lyzhi ಎಂಬ ಪದವು ಇಂಗ್ಲಿಷ್ ಭಾಷೆಯ Lychee ಪದಕ್ಕೆ ಮೂಲವಂತೆ.

ನಾನು ಮೊದಲ ಬಾರಿಗೆ ಈ ಹಣ್ಣನ್ನು ಮಾರುಕಟ್ಟೆಯಿಂದ ಮನೆಗೆ ತಂದಾಗ ನನ್ನ ಮನೆಯವರಾದ ರವಿಕುಮಾರ್  ‘ಏ …ಗೊತ್ತು ಈ ಹಣ್ಣು ನಂಗೆ.  ಕಣ್ಗುಡ್ಡೆ ಕಾಯಿ. ನಾವು ಚಿಕ್ಕವರಿದ್ದಾಗ ಲಾಲ್ ಬಾಗ್ ನಲ್ಲಿ ಇದನ್ನು ತುಂಬಾ ತಿನ್ತಾ ಇದ್ವಿ” ಅಂದರು. ‘ಕಣ್ಗುಡ್ಡೆ ಕಾಯಿ’ಎಂಬ ಕನ್ನಡ ಹೆಸರು  ಈ ಹಣ್ಣಿಗೆ ಇದೆಯಲ್ಲ ಎಂದು ನನಗೆ ಅಚ್ಚರಿ ಮತ್ತು ಸಂತೋಷ ಎರಡೂ ಆದವು!

ಈ ಹಣ್ಣನ್ನು ಬಿಡಿಸುತ್ತಿರುವಾಗ ಗಮನಿಸಿದೆ. ಅರ್ಧ ಭಾಗ ತಿರುಳನ್ನು ತೆಗೆದಿರಿ ಎಂದರೆ ಮಧ್ಯದಲ್ಲಿ ಕಡುಗಪ್ಪು ಬೀಜವು ಕಾಣಿಸಿಕೊಂಡು ಇಡೀ ಹಣ್ಣು ಮನುಷ್ಯನ ಕಣ್ಣಿನಂತೆ ಕಾಣಿಸುತ್ತದೆ! ಕಣ್ಣಿನಂತೆ ಕಾಣಿಸುವುದರಿಂದಾಗಿ ಇದು ಕಣ್ಗುಡ್ಡೆ ಕಾಯಿ! ಎಷ್ಟು ನೇರ ಮತ್ತು ಸರಳ! ಕನ್ನಡಿಗರು ಹೆಸರಿಡುವ ರೀತಿ ಎಷ್ಟು ಸೊಗಸು ಅನ್ನಿಸಿ ಮುಗುಳ್ನಕ್ಕೆ ನಾನೊಮ್ಮೆ. ನನ್ನ ಮನೆಯವರು “ಏನಕ್ಕೆ ನಗ್ತಿದೀಯ?” ಅಂದರು. ಸುಮ್ಮನೆ ತಲೆಯಲ್ಲಾಡಿಸಿದೆ. ಹೊಸ ಕನ್ನಡ ಪದ ಕಲಿತಾಗ ಆಗುವ ಖುಷಿಯನ್ನು ಮಾತುಗಳಲ್ಲಿ ಹೇಳುವುದು ಕಷ್ಟ. ಅದು ಕಿವಿಯು ಸವಿದ ಅಕ್ಷರ ಮಿಠಾಯಿ!