ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ‘ಸಾಹಿತಿ ಹಾಗೂ ಕಲಾವಿದರ ಸಮಾವೇಶ’ದಲ್ಲಿ ಒಬ್ಬ ವಿಶಿಷ್ಟ ಕಲಾವಿದೆ – ಸಂಘಟಕಿಯನ್ನು ಭೇಟಿ ಆಗುವ ಸದವಕಾಶ ಬಂತು ನನಗೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಶ್ರೀಮತಿ‌ ವಿದ್ಯಾ ಕೋಳ್ಯೂರು ಎಂಬ ಮಹಿಳೆ ಅವರು. ಊಟದ ಬಿಡುವಿನಲ್ಲಿ ಹೀಗೆಯೇ ಪರಸ್ಪರ  ಪರಿಚಯಿಸಿಕೊಂಡು  ಲೋಕಾಭಿರಾಮವಾಗಿ ಮಾತಾಡುತ್ತಾ ಇದ್ದಾಗ ಅವರ ವಿಶಿಷ್ಟ ಕಲಾಕೈಂಕರ್ಯದ ಬಗ್ಗೆ ತಿಳಿದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ಆದವು. ಏಕೆ ಗೊತ್ತೇ?

ಕಾಸರಗೋಡಿನ ಬಳಿ ಇರುವ ಕೋಳ್ಯೂರಿನ ಹಿರಿಯ ಯಕ್ಷಗಾನ ಕಲಾವಿದರೊಬ್ಬರ ಮಗಳಾಗಿ ಜನಿಸಿದ ವಿದ್ಯಾ, ಏಳು ವರ್ಷದ ಪುಟ್ಟ ವಯಸ್ಸಿನಿಂದಲೇ ಯಕ್ಷಗಾನ ಕಲಿತವರು. ಆಗಿನಿಂದ ತಮ್ಮ ಬದುಕಿನುದ್ದಕ್ಕೂ ಅಂದರೆ ಕಳೆದ ಮೂರೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಇವರು ದೇಶದ ಉದ್ದಗಲಕ್ಕೂ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. 

ಒಮ್ಮೆ ಇವರು ತಮ್ಮ ತಂಡದೊಂದಿಗೆ ಉತ್ತರ ಭಾರತದ ಸ್ಥಳವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಪ್ರೇಕ್ಷಕರೊಬ್ಬರು ಇವರ ಬಳಿ ಬಂದು “ನಿಮ್ಮ ಸಂಗೀತ, ನಾಟ್ಯ, ಉಡುಪು, ಮುಖಬಣ್ಣ, ಪ್ರದರ್ಶನ ಶೈಲಿ ಎಲ್ಲ ತುಂಬ ಚೆನ್ನಾಗಿವೆ. ಆದರೆ ನಮಗೆ ನಿಮ್ಮ ಭಾಷೆ ಅರ್ಥ ಆಗುವುದಿಲ್ಲ. ನಿಮಗೆ ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಸಾಧ್ಯವೇ? ” ಎಂದು ಕೇಳಿದರಂತೆ.‌ ಈ ಪ್ರಶ್ನೆಯು ವಿದ್ಯಾ ಅವರನ್ನು ಗಾಢವಾಗಿ ಆಲೋಚಿಸುವಂತೆ ಮಾಡಿತಂತೆ. ಪ್ರೇಕ್ಷಕರ ಸಲಹೆಯು ಸೂಕ್ತವಾಗಿದೆ ಎಂಬುದನ್ನು ಮನಗಂಡ ಅವರು ಶೀಘ್ರದಲ್ಲೇ ಐದು ಯಕ್ಷಗಾನ ಪ್ರಸಂಗಗಳನ್ನು ಹಿಂದಿಗೆ ಭಾಷಾಂತರ ಮಾಡಿಸಿ, ಕಲಾವಿದರಿಗೆ ಸಂಭಾಷಣೆಗಳ ಹಿಂದಿ ಬರಹ ರೂಪ ಕೊಟ್ಟು, ಚೆನ್ನಾಗಿ ಅಭ್ಯಾಸ ಮಾಡಿಸಿ, ಹಿಂದಿ ಭಾಷೆಯಲ್ಲಿ ಯಕ್ಷಗಾನವನ್ನು ಮಾಡಲು‌ ಪ್ರಾರಂಭಿಸಿಯೇಬಿಟ್ಟರು! ದೇಶದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಕೀರ್ತಿ ಇವರ ತಂಡಕ್ಕೆ ಸಲ್ಲುತ್ತದೆ!

ಕನ್ನಡ ಯಕ್ಷಗಾನಕ್ಕೂ ಹಿಂದಿ ಯಕ್ಷಗಾನಕ್ಕೂ ಇರುವ ಒಂದೇ ಒಂದು ವ್ಯತ್ಯಾಸ ಅಂದರೆ, ಕನ್ನಡ ಯಕ್ಷಗಾನದಲ್ಲಿ ಕಲಾವಿದರಿಗೆ ವೇದಿಕೆ ಮೇಲೆ ಸ್ವಯಂಸ್ಫೂರ್ಥ, ಸದ್ಯೋಜಾತ ಮಾತಿಗೆ ಅವಕಾಶ ಇರುತ್ತದೆ, ಹಿಂದಿ ಯಕ್ಷಗಾನದಲ್ಲಿ ಎಲ್ಲ ಸಂಭಾಷಣೆಗಳನ್ನೂ ಮೊದಲೇ ಬರೆದು ಕೊಡಲಾಗಿರುತ್ತದೆ, ಕಲಾವಿದರು ಕಂಠಪಾಠ ಮಾಡಿ ಒಪ್ಪಿಸಬೇಕಾಗುತ್ತದೆ. ಅಷ್ಟೇ ವ್ಯತ್ಯಾಸ. ಇನ್ನೊಂದು ವಿಶೇಷ ಅಂದರೆ ಎಲ್ಲ ಗಂಡಸರೇ ಇರುವ ತಂಡದಲ್ಲಿ ವಿದ್ಯಾ ಅವರು ತಾವು ಸಹ ಒಂದು ಪಾತ್ರ ಮಾಡುವುದಷ್ಟೇ ಅಲ್ಲದೆ, ಮುಂಚೂಣಿಯಲ್ಲಿ ನಿಂತು,  ಈ ತಂಡವನ್ನು  ಮುನ್ನಡೆಸುತ್ತಾರೆ. ಒಬ್ಬ ಹೆಣ್ಣುಮಗಳು ಈ ರೀತಿಯಲ್ಲಿ ಗಂಡಸರ ತಂಡದ ನಾಯಕತ್ವ ವಹಿಸಿ, ಯಕ್ಷಗಾನವನ್ನು ನಮ್ಮ ರಾಷ್ಟ್ರಭಾಷೆಯಲ್ಲಿ ದೇಶದ ಉದ್ದಗಲಕ್ಕೂ ಪ್ರದರ್ಶಿಸಿ ಜನಪ್ರಿಯಗೊಳಿಸುವುದು ತುಂಬ ಹೆಮ್ಮೆಯ ವಿಷಯ ಅಲ್ಲವೇ?

ಕನ್ನಡ ಸಂಸ್ಕೃತಿಯ ಕಂಪು, ವೈಭವವನ್ನು ಹಿಂದಿ ಭಾಷೆಯ ಮೂಲಕ ದೇಶಾದ್ಯಂತ ಹರಡುತ್ತಿರುವ ವಿದ್ಯಾ ಕೋಳ್ಯೂರು ಅವರನ್ನು ಕನ್ನಡಿಗರು ಅಭಿನಂದಿಸಲೇಬೇಕು.