ಈಚೆಗೆ ಜಯನಗರದ ಒಂದು ಅನುಕರಣಾ ಒಡವೆ ( ಇಮಿಟೇಷನ್ ಜುವೆಲ್ರಿ) ಅಂಗಡಿಗೆ ಹೋಗಿದ್ದೆ. ಅಲ್ಲಿ ಕಂಡ ಒಂದು ಆಂಗ್ಲಭಾಷಾ ಸೂಚನಾಫಲಕವು ನನಗೆ ಅಚ್ಚರಿ, ಸಂತಸ ತಂದದ್ದಲ್ಲದೆ ನನ್ನ ಮನಸ್ಸನ್ನು ಯೋಚನೆಗೂ ಹಚ್ಚಿತು. ಆ ಸೂಚನಾಫಲಕದಲ್ಲಿ ಹೀಗೆ ಬರೆಯಲಾಗಿತ್ತು –
‘Dear customer, if you live here and do not know Kannada, please learn and be one among us. Do not be a guest forever’. ( ಪ್ರಿಯ ಗ್ರಾಹಕ, ನೀವು ಇಲ್ಲಿ ವಾಸ ಮಾಡುತ್ತಿದ್ದು ನಿಮಗೆ ಕನ್ನಡ ಬರುವುದಿಲ್ಲ ಎಂದಾದರೆ ದಯಮಾಡಿ ಕನ್ನಡ ಕಲಿತು ನಮ್ಮಲ್ಲೊಬ್ಬರಾಗಿರಿ, ಎಂದೆಂದಿಗೂ ಅತಿಥಿಗಳಾಗಿಯೇ ಇರಬೇಡಿರಿ’). ಎಷ್ಟು ಪರಿಣಾಮಕಾರಿ ಸಂದೇಶ ಇದು! ಕನ್ನಡಾಭಿಮಾನದ ಬಗ್ಗೆ ಉದ್ದುದ್ದ ಭಾಷಣ ಮಾಡದೆ, ಒಂದೇ ಒಂದು ಸಾಲಿನಲ್ಲಿ ಕನ್ನಡಿಗರಿಗೆ ಇರಬೇಕಾದ ಸ್ವಾಭಿಮಾನ ಮತ್ತು ಮನುಷ್ಯ ಪ್ರೀತಿ ಎರಡನ್ನೂ ಹೇಳುವ ಸಾಲು ಇದು. ‘ ಕನ್ನಡ ಕಲಿಯಿರಿ, ನಮ್ಮಲ್ಲೊಬ್ಬರಾಗಿರಿ. ಎಂದೆಂದೂ ಅತಿಥಿಯಾಗಿಯೇ ಇರಬೇಡಿರಿ’. ಇದು ಒಂದು ರೀತಿಯಲ್ಲಿ, ಡಿವಿಜಿಯವರು ಹೇಳಿದಂತೆ, ಕನ್ನಡವು ವಿಶ್ವವನ್ನು ತಬ್ಬಿಕೊಳ್ಳುವ ರೀತಿ ಅಲ್ಲವೆ?
ತುಸು ಹುಡುಕಿದಾಗ ಗೊತ್ತಾಯಿತು – ಈ ಆಭರಣದ ಅಂಗಡಿಯ ಸ್ಥಾಪನೆ, ಯಶಸ್ಸುಗಳ ಹಿಂದೆ ತುಂಬ ಶ್ರದ್ಧೆ, ಪ್ರೀತಿ, ಪರಿಶ್ರಮ ಇವೆ. 1956ರಲ್ಲಿ ಪ್ರಾರಂಭವಾಗಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಆರು ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನ ವ್ಯಾಪಾರ ಕ್ಷೇತ್ರದ ನಕ್ಷೆಯಲ್ಲಿ ಮುಖ್ಯ ಸ್ಥಾನ ಗಳಿಸಿದ ಅಂಗಡಿ ಇದು. ಕುಂದಾಪುರದಿಂದ ಬೆಂಗಳೂರಿಗೆ ಜೀವನೋಪಾಯವನ್ನು ಅರಸಿ ಬಂದು, 1956 ರಲ್ಲಿ ಈ ಅನುಕರಣಾ ಒಡವೆ ಅಂಗಡಿಯನ್ನು ಸ್ಥಾಪಿಸಿದವರು ಶ್ರೀ ಶ್ರೀನಿವಾಸ ಜೋಗಿ. ಈಗ ಅದು ಬಹು ದೊಡ್ಡ ಉದ್ಯಮವಾಗಿ ಬೆಳೆದಿದೆ. ಬೆಂಗಳೂರಿನ ತನ್ನಂತಹ ಅಂಗಡಿಗಳಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಕೊಡುವ ಅಂಗಡಿ ಇದು! ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಊಟ, ವಸತಿ ನೀಡಿ ಮನೆಯವರಂತೆ ನೋಡಿಕೊಳ್ಳುವ, ಹಾಗೂ ತಾವು ಒಡವೆ ಖರೀದಿಸುವ ವಿತರಕರ ಬಳಿ ಎಂದೂ ಸಾಲ ಇಟ್ಟುಕೊಳ್ಳದ ಪ್ರಾಮಾಣಿಕ ಪಾವತಿಯ ಬಗ್ಗೆ ನಂಬಿಕೆ ಇಟ್ಟ ಅಂಗಡಿ ಇದು. ಒಂದು ಯಶಸ್ಸಿನ ಗಾಥೆ ಇದರ ಚರಿತೆ.
ಅಂದ ಹಾಗೆ, ಈ ಅಂಗಡಿ ಯಾವುದು ಅಂದಿರೇ? ಬೆಂಗಳೂರಿನ ಬಸವನಗುಡಿ ಹಾಗೂ ಜಯನಗರದ ಮುಖ್ಯ ವ್ಯಾಪಾರಿ ಪ್ರದೇಶಗಳಲ್ಲಿರುವ ‘ ಶ್ರೀ ಭವಾನಿ ಕಂಗನ್ ಸ್ಟೋರ್’.