ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Fuel cell 

ಫ್ಯುಯೆಲ್ ಸೆಲ್ – ಇಂಧನ ಕೋಶ – ಇಂಧನವು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತನೆ ಗೊಳ್ಳುವ ಒಂದು ಕೋಶ.

Full wave rectifier

ಫುಲ್ ವೇವ್ ರೆಕ್ಟಿಫೈಯರ್ – ಪೂರ್ಣ ಅಲೆ ಪರಿವರ್ತಕ‌ – ಪರ್ಯಾಯ ವಿದ್ಯುತ್ತಿನ ಋಣಾತ್ಮಕ ಅರ್ಧ ಅಲೆಯನ್ನು ಧನಾತ್ಮಕ ಅರ್ಧ ಅಲೆಯಾಗಿ ಪರಿವರ್ತಿಸುವ ಒಂದು‌ ಪರಿವರ್ತಕ. ಇದರಿಂದಾಗಿ ಆಂದೋಲನದ ಎರಡೂ ಅರ್ಧಗಳು ಕೂಡಿ ಏಕದಿಕ್ಕಿನ ವಿದ್ಯುತ್ತನ್ನು ನೀಡುವುದಕ್ಕೆ ಸಹಾಯವಾಗುತ್ತದೆ.

Function 

ಫಂಕ್ಷನ್ – ಗಣಿತ ಕ್ರಿಯೆ – ಒಂದು ಚರಾಂಕವನ್ನು ಇನ್ನೊಂದು ಚರಾಂಕ ಅಥವಾ ಇನ್ನು ಕೆಲವು ಬೇರೆ ಚರಾಂಕಗಳೊಂದಿಗೆ ಜೋಡಿಸುವ ಯಾವುದಾದರೂ ಗಣಿತ ಕ್ರಿಯೆ ಅಥವಾ ಕಾರ್ಯವಿಧಾನ.

Fundamental constants ( Universal constants)

ಫಂಡಮೆಂಟಲ್ ಕಾನ್ಸ್ಟೆಂಟ್ಸ್ (ಯೂನಿವರ್ಸಲ್ ಕಾನ್ಸ್ಟೆಂಟ್ಸ್) – ಮೂಲಭೂತ ಸ್ಥಿರಾಂಕಗಳು ( ಸಾರ್ವತ್ರಿಕ ಸ್ಥಿರಾಂಕಗಳು) – ಯಾವುದೇ ಗೊತ್ತಾದ ಸನ್ನಿವೇಶದಲ್ಲಿಯಾದರೂ ಎಂದೂ ಬದಲಾಗದೆಯೇ ಉಳಿಯುವ ಪರಿಮಾಣಗಳು. ಉದಾಹರಣೆಗೆ ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗ ಮತ್ತು ಎಲೆಕ್ಟ್ರಾನಿನ ವಿದ್ಯುದಂಶ. 

Fundamental frequency 

ಫಂಡಮೆಂಟಲ್ ಫ್ರೀಕ್ವೆನ್ಸಿ – ಮೂಲಭೂತ ಕಂಪನ – ಒಂದು ವಸ್ತುವು ಕಂಪಿಸಬಲ್ಲ ಅತ್ಯಂತ ಸರಳ ರೀತಿ ಇದು. ಈ ಕಂಪನದ ಆವರ್ತನವೇ ಮೂಲಭೂತ ಆವರ್ತನ.

Fundamental particles

ಫಂಡಮೆಂಟಲ್ ಪಾರ್ಟಿಕಲ್ಸ್  – ಮೂಲಭೂತ ಕಣಗಳು( ಮೂಲ ಕಣಗಳು) – ಕಣಭೌತಶಾಸ್ತ್ರದಲ್ಲಿ ನಿರೂಪಿಸುವ ಪ್ರಕಾರ ಮೂಲಭೂತ ಕಣಗಳು ಅಂದರೆ ಪರಮಾಣುಗಳ ಒಳಗಿರುವ, ಹಾಗೂ ಬೇರೆ ಯಾವುದೇ ಕಣಗಳ ಸಂಯೋಜನೆಯಿಂದ ಉಂಟಾಗಿರದ ಕಣಗಳು.

Fundamental units

ಫಂಡಮೆಂಟಲ್ ಯೂನಿಟ್ಸ್ – ಮೂಲಭೂತ( ಮೂಲಾಧಾರ) ಮೂಲಮಾನಗಳು – ಉದ್ದ, ದ್ರವ್ಯರಾಶಿ ಮತ್ತು ಸಮಯದ ಮೂಲಮಾನಗಳು‌. ಇವು ಬಹುತೇಕ ಮೂಲಮಾನ ವ್ಯವಸ್ಥೆಗಳ ಆಧಾರಸ್ತಂಭಗಳಾಗಿವೆ. ಬಹು ಪ್ರಚಲಿತವಾಗಿರುವ ಎಸ್.ಐ. ಮೂಲಮಾನ ವ್ಯವಸ್ಥೆ ( ಸಿಸ್ಟಮೆ ಇಂಟರ್ ನ್ಯಾಷನಲ್) ಯಲ್ಲಿರುವ ಮೂಲಭೂತ ಮೂಲಮಾನಗಳೆಂದರೆ ಮೀಟರ್, ಕಿಲೋಗ್ರಾಂ ಮತ್ತು ಸೆಕೆಂಡ್.

Fuse alarm

ಫ್ಯೂಸ್ ಅಲಾರ್ಮ್ – ರಕ್ಷಕ ತಂತಿ‌ ಎಚ್ಚರಗಂಟೆ – ರಕ್ಷಕ ತಂತಿಯು ಸುಟ್ಟುಹೋದಾಗ ಶ್ರವ್ಯ ಅಥವಾ ದೃಶ್ಯ ಸಂಕೇತವನ್ನು ಕೊಡುವಂತಹ ವಿದ್ಯುನ್ಮಂಡಲ.

Fuse electrical  

ಫ್ಯೂಸ್ ಎಲೆಕ್ಟ್ರಿಕಲ್ – ವಿದ್ಯುತ್ ತಂತಿತುಂಡು – ಒಂದು ವಿದ್ಯುನ್ಮಂಡಲದಲ್ಲಿ  ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ತು ಹರಿಯುವುದನ್ನು ತಡೆಯುವ ಒಂದು ತುಂಡುತಂತಿ‌ ಇದು. ಇದು, ಕಡಿಮೆ ಕರಗುಬಿಂದುವುಳ್ಳ ವಾಹಕದ ಒಂದು ತಂತಿಯ ತುಂಡು. ತುಂಬ ಹೆಚ್ಚು ವಿದ್ಯುತ್ ಹರಿದಾಗ ಈ ತಂತಿತುಂಡಿನ ತಾಪಮಾನವು ಹೆಚ್ಚುವುದರಿಂದ ಇದು ಕರಗಿ, ವಿದ್ಯುನ್ಮಂಡಲ ಮುರಿಯುತ್ತದೆ.

Fusible alloys

ಫ್ಯೂಸಿಬಲ್ ಅಲ್ಲೋಯ್ಸ್ – ಕರಗುವ ಮಿಶ್ರಲೋಹಗಳು – ಕಡಿಮೆ ಉಷ್ಣತೆ ( ಸುಮಾರು ನೂರು ಡಿಗ್ರಿ ಸೆಂಟಿಗ್ರೇಡ್) ಯಲ್ಲಿ ಕರಗುವ ಮಿಶ್ರಲೋಹಗಳು‌. ಬೆಂಕಿ‌ ಆರಿಸುವ ಕೊಳವೆಗಳು ಮುಂತಾದ ಅನೇಕ ವಸ್ತುಗಳ ತಯಾರಿಕೆಯಲ್ಲಿ‌‌ ಇವನ್ನು‌ ಉಪಯೋಗಿಸುತ್ತಾರೆ. ಬಿಸ್ಮತ್, ತವರ, ಸೀಸ ಮತ್ತು ಕ್ಯಾಡ್ಮಿಯಂಗಳ ‘ಉತ್ತಮ ಕರಗು ಮಿಶ್ರಣ’ದಿಂದ ಸಾಮಾನ್ಯವಾಗಿ ಇವನ್ನು ತಯಾರಿಸಲಾಗುತ್ತದೆ.

Page 53 of 76

Kannada Sethu. All rights reserved.