ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Fringes 

ಫ್ರಿಂಜಸ್ – ಕಪ್ಪು ಬಿಳುಪು ಪಟ್ಟಿಗಳು – ಬೆಳಕಿನಲೆಯ ಹಬ್ಬುವಿಕೆ ಅಥವಾ ಅಡ್ಡ ಹಾಯುವಿಕೆಯಿಂದ ಉಂಟಾದ ಸಮಾನಾಂತರ ಕಪ್ಪು ಬಿಳುಪು ಪಟ್ಟಿಗಳು( ಪಟ್ಟಿಯಂತಹ ಪ್ರದೇಶಗಳು).

Froth flotation

ಫ್ರಾತ್ ಪ್ಲೊಟೇಷನ್ – ನೊರೆಯ ತೇಲುವಿಕೆ – ಬೇಡದಿರುವ ಮಲಿನ ಪದಾರ್ಥಗಳಿಂದ ಲೋಹದ ಅದಿರನ್ನು ಬೇರ್ಪಡಿಸಲು ಕೈಗಾರಿಕೆಗಳಲ್ಲಿ ಬಳಸುವ ಒಂದು ವಿಧಾನ‌. ಇದರಲ್ಲಿ, ಒಟ್ಟು ಮಿಶ್ರಣವನ್ನು ಪುಡಿ ಮಾಡಿ ನೀರು, ಮತ್ತು, ನೊರೆ ಬರಿಸುವಂತಹ ಒಂದು ವಸ್ತುವನ್ನು ಸೇರಿಸಿ‌, ಇದರ ಮೂಲಕ ಗಾಳಿಯನ್ನು ನುಗ್ಗಿಸುತ್ತಾರೆ. ಬರುವಂತಹ ನೊರೆಗುಳ್ಳೆಗಳು ಲೋಹದ ಅದಿರಿನ ಕಣಗಳಿಗೆ ಅಂಟಿಕೊಂಡು ಅವುಗಳನ್ನು ಮೇಲೆ ತರುತ್ತವೆ. ಬೇಡದ ಮಲಿನ ಪದಾರ್ಥಗಳು ಕೆಳಗೇ ಉಳಿಯುತ್ತವೆ.

Fuel

ಫ್ಯುಯೆಲ್ – ಇಂಧನ – ಒಂದು ಕುಲುಮೆಯಲ್ಲಿ ಅಥವಾ ತಾಪಯಂತ್ರದಲ್ಲಿ ಉತ್ಕರ್ಷಣೆಗೆ ( oxidation) ಒಳಗಾಗಿ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪರಿವರ್ತನೆಗೊಂಡು ಉಪಯುಕ್ತವಾದ ತಾಪ ಅಥವಾ ಶಕ್ತಿಯನ್ನು ಬಿಡುಗಡೆ ಮಾಡುವ ವಸ್ತು.

Fuel cell 

ಫ್ಯುಯೆಲ್ ಸೆಲ್ – ಇಂಧನ ಕೋಶ – ಇಂಧನವು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತನೆ ಗೊಳ್ಳುವ ಒಂದು ಕೋಶ.

Full wave rectifier

ಫುಲ್ ವೇವ್ ರೆಕ್ಟಿಫೈಯರ್ – ಪೂರ್ಣ ಅಲೆ ಪರಿವರ್ತಕ‌ – ಪರ್ಯಾಯ ವಿದ್ಯುತ್ತಿನ ಋಣಾತ್ಮಕ ಅರ್ಧ ಅಲೆಯನ್ನು ಧನಾತ್ಮಕ ಅರ್ಧ ಅಲೆಯಾಗಿ ಪರಿವರ್ತಿಸುವ ಒಂದು‌ ಪರಿವರ್ತಕ. ಇದರಿಂದಾಗಿ ಆಂದೋಲನದ ಎರಡೂ ಅರ್ಧಗಳು ಕೂಡಿ ಏಕದಿಕ್ಕಿನ ವಿದ್ಯುತ್ತನ್ನು ನೀಡುವುದಕ್ಕೆ ಸಹಾಯವಾಗುತ್ತದೆ.

Function 

ಫಂಕ್ಷನ್ – ಗಣಿತ ಕ್ರಿಯೆ – ಒಂದು ಚರಾಂಕವನ್ನು ಇನ್ನೊಂದು ಚರಾಂಕ ಅಥವಾ ಇನ್ನು ಕೆಲವು ಬೇರೆ ಚರಾಂಕಗಳೊಂದಿಗೆ ಜೋಡಿಸುವ ಯಾವುದಾದರೂ ಗಣಿತ ಕ್ರಿಯೆ ಅಥವಾ ಕಾರ್ಯವಿಧಾನ.

Fundamental constants ( Universal constants)

ಫಂಡಮೆಂಟಲ್ ಕಾನ್ಸ್ಟೆಂಟ್ಸ್ (ಯೂನಿವರ್ಸಲ್ ಕಾನ್ಸ್ಟೆಂಟ್ಸ್) – ಮೂಲಭೂತ ಸ್ಥಿರಾಂಕಗಳು ( ಸಾರ್ವತ್ರಿಕ ಸ್ಥಿರಾಂಕಗಳು) – ಯಾವುದೇ ಗೊತ್ತಾದ ಸನ್ನಿವೇಶದಲ್ಲಿಯಾದರೂ ಎಂದೂ ಬದಲಾಗದೆಯೇ ಉಳಿಯುವ ಪರಿಮಾಣಗಳು. ಉದಾಹರಣೆಗೆ ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗ ಮತ್ತು ಎಲೆಕ್ಟ್ರಾನಿನ ವಿದ್ಯುದಂಶ. 

Fundamental frequency 

ಫಂಡಮೆಂಟಲ್ ಫ್ರೀಕ್ವೆನ್ಸಿ – ಮೂಲಭೂತ ಕಂಪನ – ಒಂದು ವಸ್ತುವು ಕಂಪಿಸಬಲ್ಲ ಅತ್ಯಂತ ಸರಳ ರೀತಿ ಇದು. ಈ ಕಂಪನದ ಆವರ್ತನವೇ ಮೂಲಭೂತ ಆವರ್ತನ.

Fundamental particles

ಫಂಡಮೆಂಟಲ್ ಪಾರ್ಟಿಕಲ್ಸ್  – ಮೂಲಭೂತ ಕಣಗಳು( ಮೂಲ ಕಣಗಳು) – ಕಣಭೌತಶಾಸ್ತ್ರದಲ್ಲಿ ನಿರೂಪಿಸುವ ಪ್ರಕಾರ ಮೂಲಭೂತ ಕಣಗಳು ಅಂದರೆ ಪರಮಾಣುಗಳ ಒಳಗಿರುವ, ಹಾಗೂ ಬೇರೆ ಯಾವುದೇ ಕಣಗಳ ಸಂಯೋಜನೆಯಿಂದ ಉಂಟಾಗಿರದ ಕಣಗಳು.

Fundamental units

ಫಂಡಮೆಂಟಲ್ ಯೂನಿಟ್ಸ್ – ಮೂಲಭೂತ( ಮೂಲಾಧಾರ) ಮೂಲಮಾನಗಳು – ಉದ್ದ, ದ್ರವ್ಯರಾಶಿ ಮತ್ತು ಸಮಯದ ಮೂಲಮಾನಗಳು‌. ಇವು ಬಹುತೇಕ ಮೂಲಮಾನ ವ್ಯವಸ್ಥೆಗಳ ಆಧಾರಸ್ತಂಭಗಳಾಗಿವೆ. ಬಹು ಪ್ರಚಲಿತವಾಗಿರುವ ಎಸ್.ಐ. ಮೂಲಮಾನ ವ್ಯವಸ್ಥೆ ( ಸಿಸ್ಟಮೆ ಇಂಟರ್ ನ್ಯಾಷನಲ್) ಯಲ್ಲಿರುವ ಮೂಲಭೂತ ಮೂಲಮಾನಗಳೆಂದರೆ ಮೀಟರ್, ಕಿಲೋಗ್ರಾಂ ಮತ್ತು ಸೆಕೆಂಡ್.

Page 53 of 92

Kannada Sethu. All rights reserved.