ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Gravitational force

ಗ್ರ್ಯಾವಿಟೇಷನಲ್ ಫೋರ್ಸ್ – ಗುರುತ್ವಾಕರ್ಷಣ ಬಲ‌ – ನಾಲ್ಕು ಮೂಲಭೂತ ಬಲಗಳಲ್ಲಿ ‌ಒಂದು.‌ ಈ ಬಲವು ಎಲ್ಲ‌‌ ವಸ್ತುಗಳನ್ನೂ ಪ್ರಭಾವಿಸುತ್ತದೆ ಮತ್ತು ಒಂದು ಅನಂತ ಶ್ರೇಣಿ ಹಾಗೂ ವಿಸ್ತಾರಗಳಲ್ಲಿ‌ ವರ್ತಿಸುತ್ತದೆ.

Gravitational mass

ಗ್ರ್ಯಾವಿಟೇಷನಲ್ ಮಾಸ್ – ವಸ್ತುವೊಂದರ ದ್ರವ್ಯರಾಶಿಯನ್ನು ನಿರ್ಧರಿಸುವ ಎರಡು ರೀತಿಗಳಲ್ಲಿ ಇದು ಒಂದು. ‌ ಈ ದ್ರವ್ಯರಾಶಿಯು ಒಂದು ವಸ್ತುವಿನ ಗುರುತ್ವಾಕರ್ಷಣೆಯು ಬೇರೆ ವಸ್ತುಗಳ ಮಟ್ಟಿಗೆ ಎಷ್ಟಿದೆ ಎಂಬುದನ್ನು  ನಿರ್ಧಾರ ಮಾಡುತ್ತದೆ (ಇನ್ನೊಂದು ದ್ರವ್ಯರಾಶಿಯೆಂದರೆ ಜಡತ್ವದ ದ್ರವ್ಯರಾಶಿ – ಚಲನೆಯನ್ನು ಪ್ರತಿರೋಧಿಸುವ ವಸ್ತುಗುಣ).

Gravitational shift 

ಗ್ರ್ಯಾವಿಟೇಷನಲ್ ಶಿಫ್ಟ್ – ಗುರುತ್ವೀಯ ಸ್ಥಾನಾಂತರ – ಇದು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಪದ. ಒಂದು ಆಕರದಿಂದ ಅದರಲ್ಲೂ ಮುಖ್ಯವಾಗಿ ಬೃಹತ್ ನಕ್ಷತ್ರಗಳ ಮೇಲ್ಮೈ ಯಿಂದ ಹೊರಸೂಸಿದ ಬೆಳಕು, ಹೆಚ್ಚು ಉದ್ದವುಳ್ಳ ವಿದ್ಯುತ್ಕಾಂತೀಯ ತರಂಗಾಂತರಗಳ ಕಡೆಗೆ ಸ್ಥಾನಂತರಗೊಳ್ಳುವ ವಿದ್ಯಮಾನವಿದು. ಇದನ್ನು ಡಾಪ್ಲರ್ ಪರಿಣಾಮದಿಂದ ವಿವರಿಸಬಹುದು.‌

Gravitational waves

ಗ್ರ್ಯಾವಿಟೇಷನಲ್ ವೇವ್ಸ್ – ಗುರುತ್ವೀಯ ಅಲೆಗಳು ಅಥವಾ ಗುರುತ್ವ ಅಲೆಗಳು – ಗುರುತ್ವ ಕ್ಷೇತ್ರವೊಂದರಿಂದ ಪ್ರಸಾರಗೊಂಡ ಅಲೆಗಳು. ಸಂಬಂಧಿಕತೆ ಅಥವಾ ಸಾಪೇಕ್ಷತೆಯ ಸಾಮಾನ್ಯ ಸಿದ್ಧಾಂತದ ಪ್ರಕಾರ ವೇಗೋತ್ಕರ್ಷಗೊಳ್ಳುತ್ತಿರುವ ದ್ರವ್ಯರಾಶಿಯು ಗುರುತ್ವ ಅಲೆಗಳನ್ನು ಹೊರಸೂಸುತ್ತದೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇವುಗಳನ್ನು ಕಂಡು ಹಿಡಿಯಲು ತುಂಬ ಪ್ರಯತ್ನ ಮಾಡಲಾಗಿದೆ.

Graviton 

ಗ್ರ್ಯಾವಿಟಾನ್ – ಗ್ರ್ಯಾವಿಟಾನು‌ – ಗುರುತ್ವಾಕರ್ಷಣ ಅಂತರ್ ಕ್ರಿಯೆಗಳಲ್ಲಿ ವಿನಿಮಯವಾಗುವ ಒಂದು ಕಾಲ್ಪನಿಕ‌ ಕಣ ಅಥವಾ ಶಕ್ತಿಯ ಕ್ವಾಂಟಂ(ಪೊಟ್ಟಣ). 

Gravity

ಗ್ರ್ಯಾವಿಟಿ – ಗುರುತ್ವ – ದ್ರವ್ಯರಾಶಿಯನ್ನು ಹೊಂದಿರುವ ಹಾಗೂ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದ ಒಳಗೆ ಇರುವಂತಹ ವಸ್ತುವಿನ ಮೇಲೆ ವರ್ತಿಸುವ ಬಲವೊಂದಕ್ಕೆ ಸಂಬಂಧಿಸಿದ ವಿಷಯ ಇದು. ಒಂದು ವಸ್ತುವಿನ ತೂಕವು ಆ ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಕ್ಕೆ ಸಮವಾಗಿರುತ್ತದೆ.

Gravity vector 

ಗ್ರ್ಯಾವಿಟಿ ವೆಕ್ಟರ್ – ಗುರುತ್ವ ದಿಶಾಯುತ – ಒಂದು ದತ್ತ ಬಿಂದುವಿನಲ್ಲಿ ಏಕಘಟಕ ದ್ರವ್ಯರಾಶಿಗೂ ಅದರ ಮೇಲೆ ವರ್ತಿಸುತ್ತಿರುವ ಬಲಕ್ಕೂ ಇರುವ ಅನುಪಾತ.

Gray, symbol Gy

ಗ್ರೇ,  ಸಿಂಬಲ್ Gy – ಗ್ರೇ ಸಂಕೇತ Gy – ಒಂದು ಜೀವಂತ ಅಂಗಾಂಶದೊಳಗೆ ವಿದ್ಯುದಂಶಕಾರಕ( ಅಯಾನೀಕರಣಗೊಳಿಸುವ) ವಿಕಿರಣವು ಹಾದು ಹೋಗುವಾಗ, ಏಕಘಟಕ ದ್ರವ್ಯರಾಶಿಯು ಹೀರಿಕೊಳ್ಳುವ ಒಂದು ಸಲದಳತೆಯ ಶಕ್ತಿಯ, ಎಸ್ಐ ಮೂಲಮಾನವಿದು. 

Great circle

ಗ್ರೇಟ್ ಸರ್ಕಲ್ – ಮಹಾ ವೃತ್ತ – ಒಂದು ಗೋಳದ ಮೇಲಿದ್ದು, ಅದರ ಕೇಂದ್ರವನ್ನು ಹಾದುಹೋಗುವಂತಹ ಮೇಲ್ಮೈಗುಂಟ ಉಂಟಾಗುವ ಯಾವುದಾದರೂ ಒಂದು ವೃತ್ತ. ಭೂಮಧ್ಯರೇಖೆ ಹಾಗೂ ರೇಖಾಂಶಗಳೆಲ್ಲವೂ ಭೂಮಿಯ ಮೇಲ್ಮೈಯಲ್ಲಿರುವ  ಮಹಾವೃತ್ತಗಳಾಗಿವೆ.

Greenhouse effect

ಗ್ರೀನ್ ಹೌಸ್ ಎಫೆಕ್ಟ್ – ಹಸುರು ಮನೆ ಪರಿಣಾಮ – ಭೂಮಿಯ ಮೇಲ್ಮೈಯು ಸೂರ್ಯನ ಬೆಳಕಿನ ಬಹುಭಾಗವನ್ನು ಹೀರಿಕೊಂಡಾಗ, ಈ ಬೆಳಕನ್ನು ಇಂಗಾಲದ ಡೈಆಕ್ಸೈಡ್, ನೀರು ಮತ್ತು ಮೋಡಗಳು ಹೀರಿಕೊಂಡು ಮತ್ತೆ ಭೂಮಿಗೆ ಹೊರಸೂಸುತ್ತವೆ‌. ಇದರಿಂದಾಗಿ ಭೂಮಿಯ ಉಷ್ಣತೆ ಹೆಚ್ಚಾಗುತ್ತದೆ. ಇಲ್ಲಿ ಭೂಮಿಯು ಗಿಡಗಳನ್ನು ಬೆಳೆಸುವ ಹಸುರುಮನೆಯಂತೆ ವರ್ತಿಸುವುದರಿಂದ ಇದನ್ನು ‘ಹಸುರುಮನೆ ಪರಿಣಾಮ’ ಎನ್ನುತ್ತಾರೆ.

Page 59 of 80

Kannada Sethu. All rights reserved.