ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Gyromagnetic effects

ಗೈರೋಮ್ಯಾಗ್ನೆಟಿಕ್ ಎಫೆಕ್ಟ್ಸ್ – ಭ್ರಮಣ ಕಾಂತೀಯ ಪರಿಣಾಮಗಳು – ಒಂದು ವಸ್ತುವಿನ ಕಾಂತೀಕರಣಕ್ಕೂ ಅದರ ಭ್ರಮಣಕ್ಕೂ (ಸುತ್ತುವಿಕೆಗೂ) ಇರುವ ಸಂಬಂಧದ ಗಮನಿಕೆ.

Gyromagnetic ratio

ಗೈರೋಮ್ಯಾಗ್ನೆಟಿಕ್ ರೇಶ್ಯೋ – ಭ್ರಮಣ ಕಾಂತೀಯ ಅನುಪಾತ – ಒಂದು ಪರಮಾಣು ಅಥವಾ ಬೀಜಕೇಂದ್ರದ ಕಾಂತೀಯ ಸಾಮರ್ಥ್ಯ ಹಾಗೂ ಅದರ ಕೋನೀಯ ದ್ರವ್ಯವೇಗ (ಯಾಂಗುಲಾರ್ ಮೊಮೆಂಟಮ್)ಗಳಿಗಿರುವ ಅನುಪಾತ.

Gyroscope

ಗೈರೋಸ್ಕೋಪ್ – ಭ್ರಮಣ ದರ್ಶಕ‌ – ತುಂಬ ವೇಗವಾಗಿ ಸುತ್ತುತ್ತಿರುವ ಚಕ್ರ ಅಥವಾ ಸುತ್ತ ಸುತ್ತುತ್ತಿರುವ ಬೆಳಕಿನ ಪುಂಜವನ್ನು ಹೊಂದಿರುವ ಒಂದು ಉಪಕರಣ‌. ಒಂದು ವಸ್ತುವು ತಾನು ಇರಬೇಕಾದ ದಿಕ್ಕಿನಿಂದ ಬೇರೆ ಕಡೆಗೆ ಸರಿದದ್ದನ್ನು‌ ಪತ್ತೆ ಹಚ್ಚಲು ಈ ಉಪಕರಣವನ್ನು ಬಳಸುತ್ತಾರೆ.

Gyrostat or Gyrostabilizer

ಗೈರೋಸ್ಟ್ಯಾಟ್ ಆರ್ ಗೈರೋಸ್ಟೆಬಿಲೈಝರ್ – ಭ್ರಮಣ ಸಂಸ್ಥಾಪಕ ಅಥವಾ ಸುತ್ತು ಸ್ಥಿತಿಸ್ಥಾಪಕ – ತುಸು ಪರಿವರ್ತನೆ ಮಾಡಲ್ಪಟ್ಟ ಒಂದು ಭ್ರಮಣ ದರ್ಶಕ ಇದು. ಇದರಲ್ಲಿ, ತಿರುಗುತ್ತಿರುವ ಚಕ್ರವನ್ನು ಒಂದು ಗಟ್ಟಿಯಾದ, ಅಲ್ಲಾಡದ ಆವರಣದಲ್ಲಿ ಊರಿರುತ್ತಾರೆ. ಅಕ್ಷವು ಒಂದೇ ಸಮನಾಗಿ ಇದ್ದಲ್ಲೇ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಇದನ್ನು ಬಳಸುತ್ತಾರೆ.

H.F.( High Frequency welding)

ಎಚ್.ಎಫ್.( ಹೈ ಫ್ರೀಕ್ವೆನ್ಸಿ) ವೆಲ್ಡಿಂಗ್ – ಉಚ್ಚ ಆವರ್ತನ ಬೆಸುಗೆ – ತಾಪ ಪ್ಲಾಸ್ಟಿಕ್ ವಸ್ತುಗಳಿಗೆ ಬೆಸುಗೆ ಹಾಕುವ ವಿಧಾನ. ಇದರಲ್ಲಿ ವಸ್ತುಗಳನ್ನು ಒಟ್ಟಿಗೆ ಬೆಸೆಯುವ ತಾಪವನ್ಜು ವಿದ್ಯುತ್ ಕಾಂತೀಯ ಆವರ್ತನ ವಿಕಿರಣದಿಂದ ಉತ್ಪತ್ತಿ ಮಾಡಲಾಗುತ್ತದೆ.

Hadron

ಹೇಡ್ರಾನ್ – ಹೇಡ್ರಾನು – ತುಂಬ ಬಲಯುತವಾದ ಅಂತರ್ ಕ್ರಿಯೆಗಳಲ್ಲಿ ಭಾಗವಹಿಸುವ ಒಂದು ಮೂಲಭೂತ ಕಣ ಇದು. ಲೆಪ್ಟಾನುಗಳು ಮತ್ತು ಪ್ರೋಟಾನುಗಳನ್ನು ಬಿಟ್ಟರೆ ಉಳಿದ ಎಲ್ಲ‌ ಮೂಲಭೂತ ಕಣಗಳೂ ಹೇಡ್ರಾನುಗಳೇ ಆಗಿವೆ.

Haidinger Interference fringes 

ಹೈಡಿಂಜರ್ ಇಂಟರ್ಫೆರೆನ್ಸ್ ಫ್ರಿಂಜಸ್ – ಹೈಡಿಂಜರರ ಬೆಳಕಿನಡ್ಡ ಹಾಯುವಿಕೆಯ ಪಟ್ಟಿಗಳು‌ – ಒಂದು ದಪ್ಪ‌ ಪಾರದರ್ಶಕ ಹಲಗೆಯ ಎರಡು ಸಮತಲ ಹಾಗೂ ಸಮಾನಾಂತರ ಮೇಲ್ಮೈಗಳಿಂದ ಪ್ರತಿಫಲಿತವಾದ ಅಥವಾ ಪ್ರಸಾರಗೊಂಡ ಬೆಳಕಿನ ಅಡ್ಡ ಹಾಯುವಿಕೆಯಿಂದ ರೂಪುಗೊಂಡ ಪಟ್ಟಿಶ್ರೇಣಿ (ಒಂದು ಬಿಟ್ಟು ಒಂದರಂತೆ ಮೂಡುವ ಕಪ್ಪು ಬಿಳಿ ಪಟ್ಟಿಗಳು). 

Hair hygrometer 

ಹೇರ್ ಹೈಗ್ರೋಮೀಟರ್ – ಕೇಶ ತೇವಾಂಶ ಮಾಪಕ – ವಾತಾವರಣದಲ್ಲಿರುವ ತುಲನಾತ್ಮಕ ತೇವಾಂಶವು ಹೆಚ್ಚಾದಾಗ, ತನ್ನಲ್ಲಿ‌ ಅಳವಡಿಸಿದ ಕೂದಲಿನ ಉದ್ದವು ಹೆಚ್ಚಾಗುವುದನ್ನು ಅವಲಂಬಿಸಿ ಕೆಲಸ ಮಾಡುವ ಒಂದು ತೇವಾಂಶ ಮಾಪಕ. 

Halation 

ಹೆಲೇಷನ್ – ಪ್ರಭಾವಳಿ – ಋಣ ವಿದ್ಯುದ್ವಾರ ಕಿರಣ ನಳಿಗೆಯೊಳಗೆ ಒಂದು ಬಿಂದುವಿನಷ್ಟು ಜಾಗವನ್ನು ಸುತ್ತುವರಿದಿರುವ ಬೆಳಕಿನ‌ ವರ್ತುಲಪಟ್ಟಿ(ಪ್ರಭಾವಳಿ). ಇದಕ್ಕೆ ಇರುವ ಸಾಮಾನ್ಯವಾದ ಕಾರಣವೆಂದರೆ ಪರದೆಯ ಗಾಜಿನಲ್ಲಿ ಉಂಟಾಗುವ ಆಂತರಿಕ ಪ್ರತಿಫಲನಗಳು‌.

Half – cell

ಹಾಫ್ ಸೆಲ್ – ಅರ್ಧಕೋಶ – ವಿದ್ಯುತ್ ರಾಸಾಯನಿಕ ಕೋಶ ಅಥವಾ ವಿದ್ಯುತ್ ವಿಭಜಕ‌ ಕೋಶದಲ್ಲಿನ ಒಂದು ವಿದ್ಯುದ್ವಾರ ಮತ್ತು ಅದರ ಸಂಪರ್ಕದಲ್ಲಿರುವ ವಿದ್ಯುತ್ ವಿಭಜಕ ದ್ರಾವಣ.

Page 61 of 76

Kannada Sethu. All rights reserved.