ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

International Candle

ಇಂಟರ್ ನ್ಯಾಷನಲ್ ಕ್ಯಾಂಡಲ್ – ಇಂಟರ್ ನ್ಯಾಷನಲ್ ಕ್ಯಾಂಡಲ್ – ಪ್ರಕಾಶಮಾನ ತೀಕ್ಷ್ಣತೆಯನ್ನು ಸೂಚಿಸುವ ಹಿಂದಿನ ಕಾಲದ ಒಂದು ಮೂಲಮಾನ.‌ ಇದು ಅಂದಾಜು 1.0183 ಕ್ಯಾಂಡಲಾಗೆ ಸಮ‌. ಮೂಲತಃ ಇದನ್ನು ಒಂದು ನಿರ್ದಿಷ್ಟ ವಿದ್ಯುತ್ ದೀಪದಿಂದ ಒಂದು ಸೆಕೆಂಡ್ ಗೆ ಹೊರಸೂಸಲ್ಪಟ್ಟ ಬೆಳಕು ಎಂದು ವ್ಯಾಖ್ಯಾನಿಸಲಾಗಿತ್ತು.  ನಂತರ, ಎಸ್ ಐ ಮೂಲಮಾನವಾದ ಕ್ಯಾಂಡೆಲಾ ಇದನ್ನು ಸ್ಥಾನಪಲ್ಲಟಿಸಿತು.

International date line

ಇಂಟರ್ನ್ಯಾಷನಲ್ ಡೇಟ್ ಲೈನ್ – ಅಂತಾರಾಷ್ಟ್ರೀಯ ದಿನಾಂಕ ರೇಖೆ – ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಒಂದು ಕಲ್ಪಿತ ರೇಖೆ. ಇದು ಪೆಸಿಫಿಕ್‌ ಸಾಗರದ ಮೂಲಕ ಚಲಿಸುತ್ತಾ 180 ಡಿಗ್ರಿ ಅಕ್ಷಾಂಶವನ್ನು ಅನುಸರಿಸುತ್ತದೆ. ಒಂದು ದಿನದ ಪ್ರಾರಂಭ ಮತ್ತು ಕೊನೆಯನ್ನು ಗುರುತಿಸಲು ಈ‌ ರೇಖೆಯನ್ನು ಇಟ್ಟುಕೊಳ್ಳಬಹುದೆಂದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾಗಿದೆ.

Interplanetary space

ಇಂಟರ್ ಪ್ಲ್ಯಾನೇಟರಿ ಸ್ಪೇಸ್ – ಅಂತರ್ ಗ್ರಹ ಸ್ಥಳಾವಕಾಶ – ಸೌರವ್ಯೂಹದಲ್ಲಿ ಸೂರ್ಯ ಮತ್ತು ಮತ್ತು ಗ್ರಹಗಳ ನಡುವೆ ಇರುವಂತಹ ಸ್ಥಳ. ಇದರಲ್ಲಿ ಅಂತರ್ ಗ್ರಹ ವಸ್ತುಕಣಗಳು ಇರುತ್ತವೆ.

Interrupter 

ಇಂಟರಪ್ಟರ್ – ಅಡ್ಡಿಕಾರಕ – ಸ್ಪಂದನೆ(ಪಲ್ಸ್)ಗಳನ್ನು ಸೃಷ್ಟಿಸಲು ನಿರಂತರ ವಿದ್ಯುತ್ ಪ್ರವಾಹವನ್ನು ನಿಯಮಿತವಾಗಿ ಅಡ್ಡಿ ಪಡಿಸುವ ಒಂದು ಉಪಕರಣ.

Interstellar space

ಇಂಟರ್ ಸ್ಟೆಲ್ಲಾರ್  ಸ್ಪೇಸ್ – ಅಂತರ್ ನಕ್ಷತ್ರ ಸ್ಥಳಾವಕಾಶ – ನಕ್ಷತ್ರಗಳ ನಡುವೆ ಇರುವಂತಹ ಸ್ಥಳಾವಕಾಶ. ಇದರಲ್ಲಿ ಆಕಾಶಗಂಗೆಗಳ ಒಟ್ಟು ದ್ರವ್ಯರಾಶಿಯ ಬಹು ಶೇಕಡಾ ಭಾಗವಿರುತ್ತದೆ. ಇದರಿಂದಲೇ ಹೊಸ ನಕ್ಷತ್ರಗಳು ರೂಪುಗೊಳ್ಳುವುದು‌. ಮೂಲತಃ ಈ ವಸ್ತವು ಜಲಜನಕವೇ.

Interstitial

ಇಂಟರ್ ಸ್ಟೀಷಿಯಲ್ – ವಸ್ತು ಮಧ್ಯಸ್ಥಳ – ವಸ್ತುಗಳ ಅಥವಾ ಕಟ್ಟೋಣಗಳ ಮಧ್ಯೆ ಇರುವ ಸ್ಥಳ  (ಉದಾಹರಣೆಗೆ ಹರಳುಗಳ ಮಧ್ಯೆ).

Interstitial compound

ಇಂಟರ್ ಸ್ಟೀಷಿಯಲ್ ಕಾಂಪೌಂಡ್ – ವಸ್ತುಮಧ್ಯ ಸ್ಥಳಯುತ ಸಂಯುಕ್ತ – ಒಂದು ಲೋಹದ ಕಂಡಿಚೌಕಟ್ಟು ರಚನೆಯ ಮಧ್ಯಮಧ್ಯದಲ್ಲಿನ ಸ್ಥಳಗಳಲ್ಲಿ ಅಲೋಹವೊಂದರ ಅಣುಗಳು ಅಥವಾ ಪರಮಾಣುಗಳು ಬಂದು ನೆಲೆಸುವುದು. ಈ ವಸ್ತುಗಳು ಬಹಳಷ್ಟು ಸಂದರ್ಭಗಳಲ್ಲಿ ಲೋಹದ ಗುಣಗಳನ್ನು ತೋರುತ್ತವೆ‌. ಕಾರ್ಬೈಡ್, ಬೋರೈಡ್ ಮತ್ರು ಸಿಲಿಸೈಡ್ ಗಳು ಇದಕ್ಕೆ ಉದಾಹರಣೆ.

Intrinsic ( i – type) semiconductor

ಇಂಟ್ರಿನ್ಸಿಕ್ (ಐ – ಟೈಪ್ ) ಸೆಮಿಕಂಡಕ್ಟರ್ –  ಅಂತರ್ಗತ ಅರೆವಾಹಕ – ತಾಪಮಾನೀಯ ಸಮತೋಲನವಿದ್ದಾಗ ಎಲೆಕ್ಟ್ರಾನು ಮತ್ತು‌ ರಂಧ್ರಗಳ ಸಾಂದ್ರತೆಯು ಸಮನಾಗಿರುವ ಅರೆವಾಹಕ.

Inverse network

ಇನ್ವರ್ಸ್ ನೆಟ್ವರ್ಕ್ – ಉಲ್ಟಾ ವಿದ್ಯುತ್ ಜಾಲ‌ – ಒಂದು ವಿದ್ಯುತ್ ಜಾಲದಲ್ಲಿ ಅಡ್ಡಿಗಳ ಗುಣಲಬ್ಧವು ಅವುಗಳ ಆವರ್ತನಕ್ಕೆ ಸಂಬಂಧಪಡದೆ ಸ್ವತಂತ್ರವಾಗಿದ್ದಾಗ (ಅವುಗಳ ಹರಹಿನ ಒಳಗೆ)  ಅದನ್ನು ಉಲ್ಟಾ ವಿದ್ಯುತ್ ಜಾಲ ಎನ್ನುತ್ತಾರೆ.

Inverse Stark effect

ಇನ್ವರ್ಸ್ ಸ್ಟಾರ್ಕ್ ಎಫೆಕ್ಟ್ – ವಿಲೋಮ‌ ಸ್ಟಾರ್ಕ್ ಪರಿಣಾಮ – ಸ್ಟಾರ್ಕ್ ಪರಿಣಾಮ ( ಅಣು ಮುಂತಾದವುಗಳಿಂದ ಹೊರಸೂಸುವ ವಿಕಿರಣವು ಸೀಳಿಕೊಳ್ಳುವ ಪರಿಣಾಮ) ವನ್ನು ಹೀರಿಕೆಯ ರೇಖೆಗಳಲ್ಲಿ, ಸಂದರ್ಭಗಳಲ್ಲಿ ಗಮನಿಸುವುದನ್ನು ವಿಲೋಮ ಸ್ಟಾರ್ಕ್ ಪರಿಣಾಮ ಎನ್ನುತ್ತಾರೆ‌.‌

Page 77 of 80

Kannada Sethu. All rights reserved.