ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Inverse Stark effect

ಇನ್ವರ್ಸ್ ಸ್ಟಾರ್ಕ್ ಎಫೆಕ್ಟ್ – ವಿಲೋಮ‌ ಸ್ಟಾರ್ಕ್ ಪರಿಣಾಮ – ಸ್ಟಾರ್ಕ್ ಪರಿಣಾಮ ( ಅಣು ಮುಂತಾದವುಗಳಿಂದ ಹೊರಸೂಸುವ ವಿಕಿರಣವು ಸೀಳಿಕೊಳ್ಳುವ ಪರಿಣಾಮ) ವನ್ನು ಹೀರಿಕೆಯ ರೇಖೆಗಳಲ್ಲಿ, ಸಂದರ್ಭಗಳಲ್ಲಿ ಗಮನಿಸುವುದನ್ನು ವಿಲೋಮ ಸ್ಟಾರ್ಕ್ ಪರಿಣಾಮ ಎನ್ನುತ್ತಾರೆ‌.‌

Inverse Zeeman effect

ಇನ್ವರ್ಸ್ ಝೀಮನ್ ಎಫೆಕ್ಟ್ – ವಿಲೋಮ ಝೀಮನ್ ಪರಿಣಾಮ‌ – ಹೀರಿಕೊಳ್ಳುವಿಕೆಯ‌ ವರ್ಣಪಟಲದಲ್ಲಿ‌ ಗಮನಿಸಲಾಗುವ ಝೀಮನ್ ಪರಿಣಾಮವನ್ನು ವಿಲೋಮ ಝೀಮನ್ ಪರಿಣಾಮ ಎನ್ನುತ್ತಾರೆ.

Inverting prism ( Erecting prism)

ಇನ್ವರ್ಟಿಂಗ್ ಪ್ರಿಸಂ ( ಎರೆಕ್ಟಿಂಗ್ ಪ್ರಿಸಂ) – ತಲೆಕೆಳಗೆ ಮಾಡುವ ಪಟ್ಟಕ (ನೇರ ನಿಲ್ಲಿಸುವ ಪಟ್ಟಕ) – ದೃಶ್ಯವಿಜ್ಞಾನ ವ್ಯವಸ್ಥೆಯಲ್ಲಿ ಒಂದು ಬಿಂಬವನ್ನು  ಅದರ ಆಕಾರ ಅಥವಾ ಗಾತ್ರವನ್ನು ಬದಲಾಯಿಸದೆ ತಲೆಕೆಳಗೆ ಮಾಡಲು ಬಳಸುವ ಪಟ್ಟಕ. ಆಂತರಿಕ ಪ್ರತಿಫಲನದಿಂದಾಗಿ ಈ ಪಟ್ಟಕವು ಈ ರೀತಿ ಕೆಲಸ ಮಾಡುತ್ತದೆ. 

Ion

ಐಯಾನು – ವಿದ್ಯುದಣು ಅಥವಾ ಅಯಾನು – ವಿದ್ಯುದಂಶವುಳ್ಳ ಒಂದು ಕಣ‌. ಇದರಲ್ಲಿ ಒಂದು ಪರಮಾಣು ಅಥವಾ ಪರಮಾಣುಗಳ ಒಂದು ಗುಂಪು ಇದ್ದು, ಇವು ಒಂದೋ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ ಅಥವಾ ಪಡೆದುಕೊಂಡಿರುತ್ತವೆ.‌

Ion density

ಅಯಾನ್ ಡೆನ್ಸಿಟಿ‌ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.

Ion engine

ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ‌( ಇಂಜಿನ್).

Ion irradiation

ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.  

Ionisation

ಅಯಾನೈಸೇಷನ್ – ವಿದ್ಯುದಣು ನಿರ್ಮಾಣ ಅಥವಾ ಅಯಾನೀಕರಣ – ವೇಗವಾಗಿ ಚಲಿಸುತ್ತಿರುವ ಕಣದಿಂದ ಡಿಕ್ಕಿ ಹೊಡೆಸಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುದಣುಗಳನ್ನು ನಿರ್ಮಿಸುವ ವಿಕಿರಣವನ್ನು ಉತ್ಪತ್ತಿ ಮಾಡಿ ಆ ಮೂಲಕ ವಿದ್ಯುದಣುಗಳನ್ನು ರೂಪಿಸುವುದು‌. 

Ionisation chamber

ಅಯಾನೈಸೇಷನ್ ಚೇಂಬರ್ – ವಿದ್ಯುದಣು ನಿರ್ಮಾಣ ಕೊಠಡಿ‌ – ವಿದ್ಯುದಣು ನಿರ್ಮಿಸುವ ವಿಕಿರಣವನ್ನು ಪತ್ತೆ ಹಚ್ಚಲು ಅಥವಾ ಅದನ್ನು ಅಳೆಯಲು ಬಳಸುವಂತಹ ಕೊಠಡಿ ಅಥವಾ ಗೂಡು.

Ionisation energy

ಅಯೊನೈಸೇಷನ್ ಎನರ್ಜಿ‌- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ  ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.

Page 78 of 92

Kannada Sethu. All rights reserved.