ಇನ್ವರ್ಸ್ ಝೀಮನ್ ಎಫೆಕ್ಟ್ – ವಿಲೋಮ ಝೀಮನ್ ಪರಿಣಾಮ – ಹೀರಿಕೊಳ್ಳುವಿಕೆಯ ವರ್ಣಪಟಲದಲ್ಲಿ ಗಮನಿಸಲಾಗುವ ಝೀಮನ್ ಪರಿಣಾಮವನ್ನು ವಿಲೋಮ ಝೀಮನ್ ಪರಿಣಾಮ ಎನ್ನುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಇನ್ವರ್ಟಿಂಗ್ ಪ್ರಿಸಂ ( ಎರೆಕ್ಟಿಂಗ್ ಪ್ರಿಸಂ) – ತಲೆಕೆಳಗೆ ಮಾಡುವ ಪಟ್ಟಕ (ನೇರ ನಿಲ್ಲಿಸುವ ಪಟ್ಟಕ) – ದೃಶ್ಯವಿಜ್ಞಾನ ವ್ಯವಸ್ಥೆಯಲ್ಲಿ ಒಂದು ಬಿಂಬವನ್ನು ಅದರ ಆಕಾರ ಅಥವಾ ಗಾತ್ರವನ್ನು ಬದಲಾಯಿಸದೆ ತಲೆಕೆಳಗೆ ಮಾಡಲು ಬಳಸುವ ಪಟ್ಟಕ. ಆಂತರಿಕ ಪ್ರತಿಫಲನದಿಂದಾಗಿ ಈ ಪಟ್ಟಕವು ಈ ರೀತಿ ಕೆಲಸ ಮಾಡುತ್ತದೆ.
ಐಯಾನು – ವಿದ್ಯುದಣು ಅಥವಾ ಅಯಾನು – ವಿದ್ಯುದಂಶವುಳ್ಳ ಒಂದು ಕಣ. ಇದರಲ್ಲಿ ಒಂದು ಪರಮಾಣು ಅಥವಾ ಪರಮಾಣುಗಳ ಒಂದು ಗುಂಪು ಇದ್ದು, ಇವು ಒಂದೋ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ ಅಥವಾ ಪಡೆದುಕೊಂಡಿರುತ್ತವೆ.
ಅಯಾನ್ ಡೆನ್ಸಿಟಿ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.
ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ( ಇಂಜಿನ್).
ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.
ಅಯಾನೈಸೇಷನ್ – ವಿದ್ಯುದಣು ನಿರ್ಮಾಣ ಅಥವಾ ಅಯಾನೀಕರಣ – ವೇಗವಾಗಿ ಚಲಿಸುತ್ತಿರುವ ಕಣದಿಂದ ಡಿಕ್ಕಿ ಹೊಡೆಸಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುದಣುಗಳನ್ನು ನಿರ್ಮಿಸುವ ವಿಕಿರಣವನ್ನು ಉತ್ಪತ್ತಿ ಮಾಡಿ ಆ ಮೂಲಕ ವಿದ್ಯುದಣುಗಳನ್ನು ರೂಪಿಸುವುದು.
ಅಯಾನೈಸೇಷನ್ ಚೇಂಬರ್ – ವಿದ್ಯುದಣು ನಿರ್ಮಾಣ ಕೊಠಡಿ – ವಿದ್ಯುದಣು ನಿರ್ಮಿಸುವ ವಿಕಿರಣವನ್ನು ಪತ್ತೆ ಹಚ್ಚಲು ಅಥವಾ ಅದನ್ನು ಅಳೆಯಲು ಬಳಸುವಂತಹ ಕೊಠಡಿ ಅಥವಾ ಗೂಡು.
ಅಯೊನೈಸೇಷನ್ ಎನರ್ಜಿ- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.
ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ.
Like us!
Follow us!