ನಮ್ಮ ವಿಶ್ವವಿದ್ಯಾಲಯ ( ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ) ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಮಯದಲ್ಲಿ, ವಿವಿಧ ಅಧ್ಯಯನ ವಿಭಾಗಗಳಿಂದ ಪಡೆಯಲಾಗುವ ಬಹಳ ಮುಖ್ಯವಾದ ಒಂದು ಮಾಹಿತಿ ಅಂದರೆ  “ನಿಮ್ಮ ವಿಭಾಗಕ್ಕೆ ಎಷ್ಟು ಪ್ರಶ್ನೆಪತ್ರಿಕೆಗಳ ಅಗತ್ಯ ಇದೆ?” ಎಂಬುದು‌. ಇದನ್ನು ಇಂಗ್ಲಿಷ್ ನಲ್ಲಿ indent ಎನ್ನುತ್ತಾರೆ. ಈ ‘ಇಂಡೆಂಟ್’ ಎಂಬ ಪದವನ್ನು ಸಾಮಾನ್ಯವಾಗಿ ಹಾಗೆಯೇ ಬಳಸಿಬಿಡುತ್ತಾರೆ, ಇದಕ್ಕೆ  ಕನ್ನಡ ಪದವನ್ನು ಬಳಸಲೇಬೇಕೆಂಬ ತುಡಿತ ಕಛೇರಿಗಳಲ್ಲಿ ಕಾಣುವುದಿಲ್ಲ. ನನ್ನ ಮನಸ್ಸಿಗೋ ಯಾವುದಾದರೊಂದು ಸಾಮಾನ್ಯ ಬಳಕೆಯ ಇಂಗ್ಲಿಷ್ ಪದಕ್ಕೆ ಕನ್ನಡ ಪದ ಸಿಗುತ್ತಿಲ್ಲ ಅಂದರೆ ಸಮಾಧಾನವೇ ಇರುವುದಿಲ್ಲ. ಹೀಗಾಗಿ ಈ ಪದಕ್ಕೆ ‌ಕನ್ನಡದಲ್ಲಿ ಏನನ್ನಬಹುದು ಎಂದು ಬಹಳ ಯೋಚಿಸಿದೆ. 

ಇಂಡೆಂಟ್ ಪದಕ್ಕಿರುವ ಇಂಗ್ಲಿಷ್ ಸಂವಾದಿ ಪದಗಳನ್ನು ಜಾಲಾಡಿ ಜಾಲಾಡಿ ಯಾವ ಕನ್ನಡ ಪದ ಇದಕ್ಕೆ ಹೊಂದಬಹುದು ಎಂದು ಬಹಳಷ್ಟು ಯೋಚಿಸಿದ ಮೇಲೆ ನನಗೆ ತೋಚಿದ ಒಂದು ಪದಗುಚ್ಛ ಅಂದರೆ ‘ಅಗತ್ಯ ಮನವಿ’ ಎಂಬುದು. ನನ್ನ ಕೆಲವು ಕನ್ನಡ ಅಧ್ಯಾಪಕ ಮಿತ್ರರ ಬಳಿ ನಾನು ಈ ಪದ ‘ಇಂಡೆಂಟ್’ಗೆ ಸೂಕ್ತವಾಗಬಹುದೇ ಎಂದು ಚರ್ಚಿಸಿದಾಗ ಅವರು “ಹೌದು, ಸೂಕ್ತವಾಗಿದೆ. ಬಳಸಬಹುದು” ಎಂದರು. ನಿಮ್ಮ ಅಭಿಪ್ರಾಯ ಏನು ಓದುಗಮಿತ್ರರೇ? ತಿಳಿಸುವಿರಲ್ಲ?