ಕಾಲೇಜುಗಳಲ್ಲಿ ಪಾಠ ಮಾಡುವ ಎಲ್ಲ ಕನ್ನಡ ಅಧ್ಯಾಪಕರಂತೆ ನಾನು ಸಹ, ನಮ್ಮ‌‌ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಉಚ್ಚರಿಸುವಾಗ ಮತ್ತು ಬರೆಯುವಾಗ ಮಾಡುವ ತಪ್ಪುಗಳ ಬಗ್ಗೆ ಅಸಮ್ಮತಿ ಸೂಚಿಸುತ್ತಾ, ಅವುಗಳನ್ನು ತಿದ್ದುತ್ತಾ ಇರುತ್ತೇನೆ. ದೀರ್ಘಾಕ್ಷರಗಳು, ಒತ್ತಕ್ಷರಗಳು, ಅಕಾರ-ಹಕಾರದಂತಹವುಗಳಲ್ಲಿನ‌ ಉಚ್ಚಾರ ದೋಷಗಳು, ಲೇಖನ ಚಿಹ್ನೆಗಳನ್ನು ಬಳಸದಿರುವುದು – ಇವು ಮಕ್ಕಳು ಮಾಡುವ ಸಾಮಾನ್ಯ ತಪ್ಪುಗಳಾಗಿರುತ್ತವೆ.‌ ನಾನು ಅವರ ಉಚ್ಚಾರ ಮತ್ತು ಬರವಣಿಗೆಯನ್ನು ಗಮನಿಸುತ್ತಾ ಹೋದಂತೆ ಅವರು ಅವಸರ ಮಾಡುವುದೇ ಈ ತಪ್ಪುಗಳಿಗೆ ಮುಖ್ಯ ಕಾರಣವೆಂದು ನನಗೆ ಅರಿವಾಯಿತು.‌ ಏಕೆಂದರೆ “ನಿಧಾನವಾಗಿ ಗಮನವಿಟ್ಟು ಉಚ್ಚರಿಸಿರಿ, ನಿಧಾನವಾಗಿ ಗಮನವಿಟ್ಟು ಬರೆಯಿರಿ” ಎಂದು ನಾನು ಹೇಳುತ್ತಾ ಓದಿಸಿದಾಗ, ಬರೆಸಿದಾಗ ಅವರು ಮಾಡುವ ತಪ್ಪುಗಳು ಬಹುಮಟ್ಟಿಗೆ ಕಡಿಮೆಯಾದವು. ಹೀಗಾಗಿ ನಾನು ತರಗತಿಯಲ್ಲಿ ಆಗಾಗ ತಮಾಷೆಯಾಗಿ ಹೇಳುವುದುಂಟು.

“ಬಿಎಂಟಿಸಿ ಬಸ್ಸುಗಳಲ್ಲಿ ಬರೆದಿರುತ್ತಾರಲ್ಲಮ್ಮ, ಅಪಘಾತಕ್ಕೆ ಅವಸರವೇ ಕಾರಣ ಅಂತ, ಹಾಗೇನೆ, ‘ಅಕ್ಷರ ತಪ್ಪಿಗೂ ಅವಸರವೇ ಕಾರಣ, ಉಚ್ಚಾರ ದೋಷಕ್ಕೂ ಅವಸರವೇ ಕಾರಣ’ ಅನ್ನೋ‌ ಹೊಸ ಬಳಕೆಮಾತನ್ನು‌, ಕನ್ನಡ ಭಾಷೆಯಲ್ಲಿ ಸೃಷ್ಟಿಯಾಗೋ ಹಾಗೆ ‌ನೀವು‌ ಮಾಡಿದ್ದೀರಿ. ನೋಡಿ ಮತ್ತೆ, ಎಂತಹ ಸಾಧನೆ ನಿಮ್ದು!”. ಎಂದು. ಇದನ್ನು ಕೇಳಿ, ಆ ಕಿಶೋರ ವಯಸ್ಸಿನ, ಲವಲವಿಕೆಯ ಮಕ್ಕಳು ನಗುವಾಗ ಮತ್ತು  ನಗುನಗುತ್ತಲೇ ತಮ್ಮ‌ ಈ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೋಗುವಾಗ ನನ್ನ ಮನಸ್ಸೂ ಸಹ ಮೆಲುನಗೆ ನಗುತ್ತದೆ.‌