ಮೊನ್ನೆ ಹೀಗೇ ತತ್ರಾಪಿ ಮಾತಾಡ್ತಾ (ಅದೂ ಇದೂ, casual ಎಂಬ ಅರ್ಥದಲ್ಲಿ) ನನ್ನ ಚಿಕ್ಕ ಮಗಳು “ಅಮ್ಮ ಸೀ ಶೆಲ್ ಗೆ ಕಪ್ಪೆಚಿಪ್ಪು ಅಂತಾರಲ್ಲ, ಯಾಕೆ? ಕಪ್ಪೆಚಿಪ್ಪಲ್ಲಿ ಕಪ್ಪೆ ಇರಲ್ಲ ಅಲ್ವಾ?” ಅಂತ ಕೇಳಿದಳು. ಅವಳ ಪ್ರಶ್ನೆ ನನ್ನನ್ನ ತುಂಬ ಯೋಚನೆಗೆ ಹಚ್ತು.
ಸಮುದ್ರ ದಂಡೆಗೆ ಹೋದವರು ಅಲ್ಲಿ ಬಿದ್ದಿರುವ ವಿವಿಧ ಅಳತೆ, ಬಣ್ಣಗಳ ಚಿಪ್ಪುಗಳನ್ನು ನೋಡಿದಾಗ ಅವನ್ನು ಆರಿಸಿಕೊಳ್ಳುವುದು, ತಮ್ಮ ಸಮುದ್ರ ಪ್ರವಾಸದ ನೆನಪಿಗಾಗಿ ಮನೆಗೆ ತಂದು ಇಟ್ಟುಕೊಳ್ಳುವುದು ಹೀಗೆ ಮಾಡುತ್ತಾರೆ ಅಲ್ಲವೆ? ಇಂಥವನ್ನು ಕನ್ನಡದಲ್ಲಿ ಕಪ್ಪೆಚಿಪ್ಪು ಅಂತ ಕರೆಯೋದು ರೂಢಿ.
ವಾಸ್ತವವಾಗಿ ಈ ಚಿಪ್ಪುಗಳು ಮೃದ್ವಂಗಿಗಳು ( molluscs) ಎಂಬ ಒಂದು ಜಾತಿಯ ಸಮುದ್ರ ಜೀವಿಗಳ ಹೊರಕವಚಗಳು. ಮೃದ್ವಂಗಿಗಳು ಅಂದರೆ ಮೃದು ದೇಹದ ಜೀವಿಗಳು ಎಂದು ಅರ್ಥ. (ಮೃದು + ಅಂಗಿ = ಮೃದ್ವಂಗಿ) ಇವು ಸಾಗರ ಜೀವಿಗಳಲ್ಲಿ ಬಹು ದೊಡ್ಡ ಪ್ರಭೇದವಂತೆ! ಸಾಗರಜೀವಿಗಳಲ್ಲಿ 23% ಜೀವಿಗಳು ಈ ಮೃದ್ವಂಗಿಗಳೇ ಅಂತೆ! ಬಸವನ ಹುಳುವಿನಂತಹ ಒಂದು ಚಿಪ್ಪಿನ ಜೀವಿಗಳು, ತುಳು ಮಾತಾಡುವವರು ‘ಮರುವಾಯಿ’ ಎಂದು ಕರೆಯುವ,
ಚಿಪ್ಪನ್ನು ಬಿಡಿಸಿ ತಿನ್ನಲು ಸಾಧ್ಯವಿರುವ ಎರಡು ಚಿಪ್ಪಿನ ಜೀವಿಗಳು, ಹಾಗೂ ಚಿಪ್ಪೇ ಇಲ್ಲದ ಆಕ್ಟೋಪಸ್ ರೀತಿಯವು ಸಹ ಈ ಮೃದ್ವಂಗಿಗಳ ಪ್ರಭೇದಕ್ಕೇ ಸೇರುತ್ತವಂತೆ! ಅತ್ಯಂತ ಮೃದುವಾದ ಇವುಗಳ ದೇಹದ ರಕ್ಷಣೆಗಾಗಿ, ಪ್ರಕೃತಿಮಾತೆ ಕೊಟ್ಟ ಚಿಪ್ಪನ್ನೇ ನಾವು ಕಪ್ಪೆಚಿಪ್ಪು ಅನ್ನುವುದು. ಮುತ್ತನ್ನು ಸೃಷ್ಟಿಸುವ ಜೀವಿಗಳು( oysters) ಸಹ ಈ ಮೃದ್ವಂಗಿಗಳ ಪ್ರಭೇದಕ್ಕೇ ಸೇರುತ್ತವೆ. ಮನುಷ್ಯನ ನಾಗರಿಕತೆಯ ಬೆಳವಣಿಗೆಯಲ್ಲಿ ಈ ಮೃದ್ವಂಗಿಗಳಿಗೆ ತುಂಬ ಪ್ರಾಮುಖ್ಯ ಇದೆ. ಅವು ಮನುಷ್ಯರ ಆಹಾರದ ದೊಡ್ಡ ಭಾಗ ಮಾತ್ರವಲ್ಲ, ಈ ಚಿಪ್ಪುಳ್ಳ ಜೀವಿಗಳನ್ನು ಕೈಗಾರಿಕಾಪೂರ್ವ ಯುಗದಲ್ಲಿ ಹಣವಾಗಿ ಬಳಸ್ತಿದ್ದರಂತೆ!!
ಹೌದು, ನನ್ನ ಮಗಳ ಅನುಮಾನ ಸಕಾರಣವಾದದ್ದು. ಕಪ್ಪೆಚಿಪ್ಪಿನಲ್ಲಿ ಕಪ್ಪೆ ಇರಲ್ಲ! ಜನರು ನೀರಿರುವ ಸ್ಥಳ ಮತ್ತು ಕಪ್ಪೆಯ ಸಂಬಂಧದಿಂದಾಗಿ, ಈ ಮೃದ್ವಂಗಿ ಚಿಪ್ಪನ್ನು ಸುಲಭವಾಗಿ ಕಪ್ಪೆಚಿಪ್ಪು ಅಂತ ಕರೆದುಬಿಟ್ಟರು ಅಷ್ಟೇ. ಕನ್ನಡ ಭಾಷೆಯಲ್ಲಿ ಇಂತಹ ಪದಗಳು ಬಳಕೆಗೆ ಬಂದ ರೀತಿಯ ಬಗ್ಗೆ ಯೋಚಿಸಿದರೆ ಆಶ್ಚರ್ಯ ಆಗುತ್ತೆ ಅಲ್ವಾ!?