ಯಾವುದೇ ಕವಿತೆಯ ಕೇಂದ್ರವೆಂದರೆ ಅದು ಭಾವ. ಕವಿಯ ಅನುಭವದ ಅಭಿವ್ಯಕ್ತಿ ಅಥವಾ ಭಾವದ ಭಾಷಾರೂಪೀ ಪ್ರಕಟಣೆಯೇ ಕವಿತೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಮಾಡುವಾಗ ಅದನ್ನು ವಾಚಿಸುವ ರೀತಿಯು ಬಹಳ ಮುಖ್ಯ ವಾಗುತ್ತದೆ. ಏಕೆಂದರೆ ಸರಿಯಾದ ಒತ್ತು, ಸ್ವರಭಾರ, ಧ್ವನಿಯ ಏರಿಳಿತಗಳು ಕವಿತೆಯ ಭಾವದ ಜಾಡು ಹಿಡಿಯುತ್ತವೆ. ಉದಾಹರಣೆಗೆ, ‘ಸಾಮಾನ್ಯನೇ ಈ ಗಾಂಧಿ’ ಎಂಬ ಸಾಲು. ಸಾಮಾನ್ಯನೇ ಎಂಬುದನ್ನು ಉಚ್ಚರಿಸುವ ಎರಡು ಬೇರೆ ಬೇರೆ ರೀತಿಗಳಿಂದ ಗಾಂಧಿ ಎಲ್ಲರಂತೆ ಸಾಮಾನ್ಯನೇ ಅನ್ನುವ ಅರ್ಥವೂ ಬರಬಹುದು, ಅಥವಾ ಅವನು ಎಲ್ಲರಂತೆ ಸಾಮಾನ್ಯನಲ್ಲ ಅನ್ನುವ ಅರ್ಥವೂ ಬರಬಹುದು.
ಅಧ್ಯಾಪಕರು ತಾವು ಕವಿತೆಯ ಭಾವಾನುಸಾರಿಯಾದ ವಾಚನ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳಿಂದ ಅದನ್ನು ವಾಚಿಸುವಂತೆ ಮಾಡುವುದು ಸಹ ಅಷ್ಟೇ ಮುಖ್ಯ. ಏಕೆಂದರೆ ಕವಿತೆಯು ಹೊರಡುವುದು ಕವಿಯ ಹೃದಯದಿಂದಲಾದರೆ ಅದು ಅಂತಿಮವಾಗಿ ಮುಟ್ಟಬೇಕಾದ್ದು ಓದುಗನ ಹೃದಯವನ್ನು. ಮತ್ತು, ಹೃದಯವನ್ನು ಮುಟ್ಟಲು ಭಾವಸಹಿತ ವಾಚನವೇ ಸೇತುವೆ.