ಮೈಸೂರು, ಬೆಂಗಳೂರು ಮುಂತಾದ ಹಳೆ ಮೈಸೂರಿನ ಪ್ರದೇಶಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿ ಹೂವು, ತರಕಾರಿ ಮುಂತಾದವನ್ನು ಕೊಂಡವರಿಗೆ ‘ಕೊಸರು’ ಎಂಬ ಪದ ಹಾಗೂ ಪ್ರಕ್ರಿಯೆಯ ಪರಿಚಯ ಇರುತ್ತದೆ ಎಂದು ನಾವು ಭಾವಿಸಬಹುದು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ವೃತ್ತದ ಬಳಿ ಹೂಮಾರಾಟ ಮಾಡುತ್ತಿರುವ, ಹಳೆಕಾಲದ ವ್ಯಾಪಾರಿಯೊಬ್ಬರ ಬಳಿ ನೀವು ಒಂದು ಮೊಳ ಮಲ್ಲಿಗೆ ಅಥವಾ ಕನಕಾಂಬರ ಹೂವನ್ನು ಕೊಂಡಿರಿ ಎಂದಿಟ್ಟುಕೊಳ್ಳೋಣ. ಬೆಲೆ ವಿಚಾರಿಸಿ ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡುವಂತೆ ಹೇಳಿ ವ್ಯಾಪಾರಿಗೆ ನೀವು ಹಣ ಕೊಟ್ಟು, ಅವರು ಬಾಳೆ ಎಲೆ/ಸುದ್ದಿ ಪತ್ರಿಕೆಯ ಕಾಗದ ಪೊಟ್ಟಣ/ ಪ್ಲಾಸ್ಟಿಕ್ ತೊಟ್ಟೆಯಲ್ಲಿ(ಕವರ್) ನೀವು ಕೊಂಡ ಹೂವನ್ನು ಸುತ್ತಿ ನಿಮ್ಮ ಕೈಗೆ ಕೊಡುವಾಗ ಇನ್ನೂ ಕೆಲವು ಹೂಗಳನ್ನು ಉಚಿತವಾಗಿ ನಿಮ್ಮ ಚೀಲಕ್ಕೆ ಹಾಕುತ್ತಾರೆ. ಇದಕ್ಕೆ ಕೊಸರು ಕೊಡುವುದು, ಕೊಸರಿಗೆ ಕೊಡುವುದು ಎನ್ನಲಾಗುತ್ತದೆ.

ಕೊಸರು ಎಂಬ ಪದಕ್ಕೆ  ನಿಘಂಟಿನಲ್ಲಿ ಇರುವ ಬೇರೆ ಬೇರೆ ಅರ್ಥಗಳ  ಜೊತೆಗೆ,  ಜಗ್ಗಾಡು, ವ್ಯಾಪಾರದಲ್ಲಿ ಚೌಕಾಸಿ ಮಾಡು ಎಂಬ ಅರ್ಥವೂ ಇದೆ.‌ ಮೇಲ್ನೋಟಕ್ಕೆ ಕೊಸರು ಕೊಡುವುದು ಎಂದರೆ ವ್ಯಾಪಾರಿಗಳ ಧಾರಾಳತನ ಆಹಾ! ಎಂಬ ಭಾವನೆ ಬಂದರೂ ಇದರ ಒಳಮರ್ಮ ಬೇರೆ ಇದೆ.‌ ನಾನು ಹೂ ಮಾರುತ್ತಿದ್ದ ಕೆಲವು ಮಂದಿಯನ್ನು ಈ‌ ಬಗ್ಗೆ ನೇರವಾಗಿ ‘ “ಯಾಕೆ  ನೀವು ಕೊನೆಯಲ್ಲಿ ಒಂದಷ್ಟು ಜಾಸ್ತಿ ಕೊಡ್ತೀರ?” ಎಂದು ಕೇಳಿದಾಗ   ಅವರು ಅಂದಿದ್ದು ಹೀಗೆ.‌ “ಆಮೇಲೆ,  ಕೊಡಿ ಕೊಡಿ, ಕಮ್ಮಿ ಕೊಟ್ರಿ ಎಂದು ಕೊಸರಾಡ್ತಾರಲ್ಲ, ಅದನ್ನು ತಪ್ಪಿಸಕ್ಕೆ ಮುಂಚೇನೆ ಕೊಟ್ಬಿಡ್ತೀವಮ್ಮ”.  ಅಂದರೆ ಇದು ಪಿರಿಪಿರಿ ಮಾಡುವ ಗ್ರಾಹಕರ ಬಾಯಿ ಮುಚ್ಚಿಸಲು ಮತ್ತು ಅನಗತ್ಯ ವಾದವಿವಾದ, ಕಾಲಹರಣಗಳನ್ನು ತಪ್ಪಿಸಲು ವ್ಯಾಪಾರಿಗಳು ಮುಂಚೆಯೇ ವಹಿಸುವ ಎಚ್ಚರಿಕೆ! ಅದೂ ಅಲ್ಲದೆ ಪಾಪ-ಪುಣ್ಯ, ಧರ್ಮ ಕರ್ಮಗಳನ್ನು ತುಂಬ  ಮುಗ್ಧವಾಗಿ  ನಂಬುತ್ತಿದ್ದ ಹಳೆಗಾಲದಲ್ಲಿ ಮೊಳ, ಮಾರು ಮುಂತಾದ ಕೈಯಂದಾಜು, ಮೈಯಂದಾಜುಗಳಲ್ಲಿ ಆಗಿರಬಹುದಾದ ಕೊರತೆಯನ್ನು ಸರಿ ಪಡಿಸಲು ಸಹ ಹೀಗೆ ಕೊಸರು ಕೊಡಲಾಗುತ್ತಿತ್ತು ಎನ್ನುತ್ತಾರೆ. ಏಕೆಂದರೆ ಗಿರಾಕಿಗಳಿಗೆ ಕೊಡುವ ಅಳತೆಯಲ್ಲಿ ತಪ್ಪು ಮಾಡಿ, ತಾವು ಕಡಿಮೆ ಕೊಟ್ಟರೆ, ಆಯುಷ್ಯ ಕಡಿಮೆ ಆಗುತ್ತದೆ ಎಂಬ ಭಾವನೆ  ವ್ಯಾಪಾರಿಗಳಲ್ಲಿ ಇತ್ತಂತೆ. 

ಒಟ್ಟಿನಲ್ಲಿ ಕನ್ನಡ ನಾಡಿನ ಜನರ ಬದುಕಿನ ಕ್ರಮಗಳನ್ನು ಅರಿಯುವ ಅನೇಕ ಕೀಲಿಕೈಪದಗಳಲ್ಲಿ ಕೊಸರು ಕೂಡ ಒಂದು ಅನ್ನಬಹುದು.