ನಮ್ಮ ನಲ್ಮೆಯ ಕನ್ನಡ ಭಾಷೆಯಲ್ಲಿ ಒಂದು ಒಳ್ಳೆಯ ಮಾತಿದೆ, ‘ತಂಪು ಹೊತ್ತಿನಲ್ಲಿ ನೆನೆಯಬೇಕಾದವರು’ ಅಂತ. ಸ್ವಲ್ಪ ಮಟ್ಟಿಗೆ ಸಂಸ್ಕೃತದ ‘ಪ್ರಾತಃಸ್ಮರಣೀಯರು’ ಎಂಬ ಪದದ ಅರ್ಥಕ್ಕೆ ಹತ್ತಿರವಾದ ಪದ ಇದು. ಕಿನ್ನಿಕಂಬಳ ಪದ್ಮನಾಭ ರಾವ್, ಜನಪ್ರಿಯವಾಗಿ ನಾವೆಲ್ಲರೂ ಬಲ್ಲಂತೆ ಕೆ.ಪಿ.ರಾವ್ ರು ಅಂತಹ ಒಬ್ಬ ವ್ಯಕ್ತಿ, ಅಂದರೆ, ನಾವು ತಂಪು ಹೊತ್ತಿನಲ್ಲಿ ನೆನೆಯಬೇಕಾದವರು.
ಭಾಷೆಗಳ ಬಗೆಗೆ ಅಪಾರ ಕುತೂಹಲ, ಯಂತ್ರಗಳನ್ನು ಕುರಿತ ದೀರ್ಘಾವಧಿಯ ಪರಿಣತಿ ಹಾಗೂ ನಿರಂತರ ಕಲಿಕೆಯ ಬಗ್ಗೆ ಅತ್ಯಾಸಕ್ತಿ ಇರುವ ವ್ಯಕ್ತಿಯೊಬ್ಬರು, ತನ್ನ ನಾಡು, ನುಡಿಗೆ ಎಷ್ಟು ದೊಡ್ಡ ಕೊಡುಗೆ ಕೊಡಬಹುದು ಎಂಬುದಕ್ಕೆ ಈ ಹಿರಿಯರು ಅತ್ಯುತ್ತಮ ಉದಾಹರಣೆ. ಇವರನ್ನು ಕನ್ನಡದ ಹೆಮ್ಮೆ ಅಂದರೆ ಅದು ಹೊಗಳಿಕೆಯ ಮಾತಲ್ಲ, ಅದು ಅವರ ಪರಿಚಯ.
ನಮ್ಮಲ್ಲಿ ಬಹಳಷ್ಟು ಜನರು ಗಣಕಯಂತ್ರದಲ್ಲಿ ಕನ್ನಡ ಬೆರಳಚ್ಚು ಮಾಡಲು ‘ನುಡಿ’ ಎಂಬ ತಂತ್ರಾಂಶವನ್ನು ಬಳಸುತ್ತೇವಲ್ಲ ಅದರ ಜನಕ ಕೆ.ಪಿ.ರಾವ್! ಕಿನ್ನಿಕಂಬಳ ಎಂಬ ಮಂಗಳೂರು ಸಮೀಪದ ಬಹುಭಾಷಿಕ ಹಳ್ಳಿಯಲ್ಲಿ ಇವರು ಹುಟ್ಟಿದ್ದು, ಮುದ್ರಣ ಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದು, ತಮಗಿದ್ದ ಅಪಾರ ಕಲಿಕೆಯ ಹಾಗೂ ತಮ್ಮ ಕೆಲಸದಲ್ಲಿ ನೂತನತೆಯನ್ನು ಸದಾ ಸೃಜಿಸುತ್ತಿರಬೇಕು( ಇನ್ನೋವೇಷನ್) ಎಂಬ ಹುರುಪು ಇವರಲ್ಲಿ ಕನ್ನಡ ಭಾಷೆಗೆ ಒಂದು ಕೀಲಿಮಣೆಯನ್ನು ನಿರ್ಮಿಸಬೇಕು ಎಂಬ ಹಂಬಲ ತಂದವು. ಇವರು ಕೆಲಸ ಮಾಡಿದ ಬ್ರಿಟನ್ ನ ಮಾನೋಟೈಪ್ ಹಾಗೂ ಮಣಿಪಾಲದ ತಂತ್ರಜ್ಞಾನ ಸಂಸ್ಥೆ (ಎಂಐಟಿ) ಇವರಿಗೆ ಮುದ್ರಣ ಹಾಗೂ ಕೀಲಿಮಣೆಗಳ ವಿಷಯದಲ್ಲಿ ನೈಜ ಹಾಗೂ ಅಮೂಲ್ಯ ಅನುಭವಗಳನ್ನು ನೀಡಿದವು. ಇವೆಲ್ಲವನ್ನೂ ಬಳಸಿಕೊಂಡು ಈ ತಂತ್ರಜ್ಞಾನಿ ಮತ್ತು ಪ್ರಾಧ್ಯಾಪಕ, ಕನ್ನಡಕ್ಕಾಗಿ ಸರಳ-ಸುಗಮ ರೀತಿಯ ಕೀಲಿಮಣೆಯನ್ನು ನಿರ್ಮಿಸಿದರು. ಲಕ್ಷಾಂತರ, ಕೋಟ್ಯಾಂತರ ಕನ್ನಡಿಗರಿಗೆ ಇವರು ಗಣಕಬರಹ ಸುಗಮತೆಯ ಉಡುಗೊರೆ ಕೊಟ್ಟರು ಅಂದರೆ ತಪ್ಪಿಲ್ಲ. ಎಂಬತ್ತೈದರ ತುಂಬು ಹರೆಯದಲ್ಲೂ ಪ್ರತಿ ಎರಡು ತಿಂಗಳಿಗೊಮ್ಮೆ ಒಂದು ಅಂತರ್ಜಾಲ ಶಿಕ್ಷಣವನ್ನು ಇವರು ಕಲಿತು ಪೂರೈಸುತ್ತಾರೆ ಎಂದರೆ ಕಲಿಕೆಯ ಬಗ್ಗೆ ಇವರಿಗಿರುವ ಅತ್ಯಾಸಕ್ತಿ ಎಂಥದ್ದು ಎಂದು ಅರ್ಥವಾಗುತ್ತದೆ. ಡಿ.ಡಿ.ಕೋಸಾಂಬಿ ಎಂಬ ಮಹಾನ್ ಸಮಾಜವಿಜ್ಞಾನಿ ಹಾಗೂ ತಮ್ಮ ಸಹೋದ್ಯೋಗಿಯಿಂದ ಇವರು ಈ ‘ನಿರಂತರ ಕಲಿಕೆ’ ಎಂಬ ಮಾಂತ್ರಿಕ ಸಂಗತಿಯತ್ತ ಆಕರ್ಷಿತರಾಗಿ, ಜೀವನ ಪೂರ್ತಿ ಅದನ್ನು ತಮ್ಮ ಸಂಗಾತಿಯಾಗಿಸಿಕೊಂಡಿದ್ದಾರೆ.
ಈ ಕನ್ನಡ ತಂತ್ರಾಂಶ ಲಿಪಿನಿಪುಣನಿಗೆ ನಾವೊಮ್ಮೆ ನಮಿಸೋಣ.