‘ವಿದ್ಯಾರ್ಥಿಗಳು ತುಂಬ ಲವಲವಿಕೆಯಿಂದ ಸಮಾರಂಭದಲ್ಲಿ ಭಾಗವಹಿಸಿದರು’.

‘ನರ್ತಕಿಯ ಲವಲವಿಕೆಯು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿತು’.

‘ಹದಿಹರೆಯದ ಸಹಜ ಲವಲವಿಕೆಯಿಂದ ಕಂಗೊಳಿಸುತ್ತಿದ್ದ ಪ್ರೇಕ್ಷಕ ಸಮುದಾಯವು ಅತಿಥಿಗಳ ಗಮನ ಸೆಳೆಯಿತು’. 

ಇಂತಹ ವಾಕ್ಯಗಳನ್ನು  ಓದಿದಾಗೆಲ್ಲ ನನಗೆ ಈ ‘ಲವಲವಿಕೆ’ ಎಂಬ ಪದದ ಬಗ್ಗೆ ಬಹಳ ಕುತೂಹಲ ಉಂಟಾಗ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ಈ ನಾಮಪದಕ್ಕೆ ‘ಉತ್ಸಾಹ, ಹುರುಪು, ಹಂಬಲ‌, ಆಸಕ್ತಿ’ ಎಂಬ ಅರ್ಥಗಳನ್ನು ಕೊಡುತ್ತದೆ‌. ಅದೇ ನಿಘಂಟಿನಲ್ಲಿ ‘ಲವಲವಿಸು’ ಎಂಬ ಕ್ರಿಯಾಪದ ಸಹ ಇದೆ. ಇದಕ್ಕೆ ‘ಉತ್ಸುಕವಾಗು, ತವಕ ಪಡು, ಹಂಬಲಿಸು, ಬಯಸು’ ಎಂಬ ಅರ್ಥಗಳಿವೆ. ಅದೇನೇ ಇರಲಿ, ಈ ಪದವನ್ನು ಕೇಳಿದಾಗ/ಓದಿದಾಗ ನನ್ನ ಮನಸ್ಸಿಗೆ ‘ಅಹಾ! ಎಂತಹ ವಿಶಿಷ್ಟ ಪದ ಇದು! ಎಲ್ಲಿಂದ ಬಂದಿರಬಹುದು ಇದು ಕನ್ನಡಕ್ಕೆ, ಅಥವಾ ಇದು ಕನ್ನಡದ್ದೇ ಪದವಾ?’ ಎಂಬ ಕುತೂಹಲ ಮೂಡುತ್ತಿದ್ದುದು ಮಾತ್ರ ನಿಜ.

ಒಮ್ಮೊಮ್ಮೆ, ‘ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತು’ ಎಂಬ ಹಾಗೆ ನಮ್ಮ ತಲೆಯಲ್ಲಿ ಪ್ರಶ್ನೆ ಮೂಡಿಸುವ ಪದಗಳ ಮೂಲ ಇದ್ದಕ್ಕಿದ್ದಂತೆ ಸಿಕ್ಕಿಬಿಡುತ್ತದೆ. ಬೇರೆ ಯಾವುದೋ ಪದವೊಂದಕ್ಕಾಗಿ ನಾನು ಭಾಷಾತಜ್ಞ ಶ್ರೀ ಜಿ.ವೆಂಕಟ ಸುಬ್ಬಯ್ಯನವರ ‘ಎರವಲು ಪದಕೋಶ’ ಎಂಬ ನಿಘಂಟಿನಲ್ಲಿ ಹುಡುಕುತ್ತಿದ್ದಾಗ ನನ್ನ ಕಣ್ಣಿಗೆ ‘ಲವಲವ’ ಎಂಬ ಪದ ಬಿತ್ತು! ಇದು ಮರಾಠಿ ಭಾಷೆಯ ಪದವಂತೆ. ಇದಕ್ಕೆ ಉತ್ಸುಕತೆ, ಆತುರ, ತವಕ, ಆಸೆ, ಹಂಬಲ, ಬಯಕೆ – ಈ ಎಲ್ಲ ಅರ್ಥಗಳಿವೆಯಂತೆ. ಅಗೊ! ಈಗ ಸಿಕ್ಕಿತು ನನಗೆ ಕನ್ನಡದ ಲವಲವಿಕೆ ಪದದ ಮೂಲ.‌ ಅಂದ್ರೆ, ಮರಾಠಿ ಭಾಷೆಯ ಲವಲವ ಪದವು ಕನ್ನಡದಲ್ಲಿ ಲವಲವಿಕೆ ಆಗಿದೆ!

 ಒಟ್ಟಿನಲ್ಲಿ ಪದಗಳ ಮೂಲ ಹುಡುಕುವುದು ಒಂದು ಸ್ವಾರಸ್ಯಕರ ಸಂಗತಿ. ಏನಂತೀರಿ?