ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಒಮ್ಮೊಮ್ಮೆ ಬಹು ಸ್ವಾರಸ್ಯಕರ ಅನುಭವಗಳಾಗುತ್ತವೆ‌.

ಈಚೆಗೆ ಬಿ.ಸಿ.ಎ. ತರಗತಿಯೊಂದರಲ್ಲಿ ಕನ್ನಡ ವಿಷಯದ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪಾಠಕ್ಕೆ ಸಂಬಂಧ ಪಟ್ಟ ವಿಷಯವೊಂದನ್ನು ಬರೆಸುತ್ತಿದ್ದೆ‌. ನನ್ನ ಅನುಭವದಲ್ಲಿ, ಲೇಖನ ಚಿಹ್ನೆಗಳಿಗೆ ವಿದ್ಯಾರ್ಥಿಗಳು ಕೊಡಬೇಕಾದಷ್ಟು ಗಮನ ಕೊಡುವುದಿಲ್ಲ. ಹಾಗಾಗಿ ಅಂದು ಬರೆಸುತ್ತಿದ್ದಾಗ “ನೋಡಿ ಮಕ್ಳೇ, ಲೇಖನ ಚಿಹ್ನೆಗಳನ್ನು ಸರಿಯಾಗಿ ಹಾಕ್ಬೇಕು ನೀವು. ದಾರದಲ್ಲಿ ಮಣಿಗಳನ್ನು ಪೋಣಿಸಿ ಕೊನೆಯಲ್ಲಿ ಗಂಟು ಹಾಕೋದು ಎಷ್ಟು ಮುಖ್ಯಾನೋ, ವಾಕ್ಯದಲ್ಲಿ ಲೇಖನ ಚಿಹ್ನೆಗಳನ್ನು ಹಾಕೋದು ಅಷ್ಟೇ ಮುಖ್ಯ. ಗಂಟು ಹಾಕದ ಮಣಿಸರದಿಂದ ಮಣಿಗಳು ಉದುರಿ ಹೋಗೋ ಹಾಗೆ ಲೇಖನ ಚಿಹ್ನೆ ಇಲ್ಲದಿರೋ ವಾಕ್ಯದಿಂದ ಅರ್ಥ ಬಿದ್ದು ಹೋಗುತ್ತೆ. ಗಮನ ಕೊಟ್ಟು ಬರೀರಿ” ಅಂತ ಹೇಳಿದೆ. ಆಗ ಒಬ್ಬ ವಿದ್ಯಾರ್ಥಿನಿ‌ ಪಕ್ಕದವಳ ಬಳಿ ಪಿಸುಗುಟ್ಟಿದಳು – “ಲೇಖನ ಚಿಹ್ನೆ ಅಂದ್ರೆ ಏನೇ?”.  ಅಯ್ಯೋ, ಏನೆನ್ನಬೇಕು ಈ ಪರಿಸ್ಥಿತಿಗೆ!! “ಏನಮ್ಮ, ಚುಕ್ಕೆ( ಪೂರ್ಣವಿರಾಮ), ಅಲ್ಪವಿರಾಮ(ಕೊಮಾ), ಅರ್ಧವಿರಾಮ ಅಡ್ಡಗೆರೆ ಎಲ್ಲ ಹಾಕಲ್ವೇನಮ್ಮಾ…..ಅವೇ ಲೇಖನ ಚಿಹ್ನೆಗಳು” ಅಂದೆ. 

ದೂರವಾಣಿ, ಗಣಕಯಂತ್ರಗಳಲ್ಲೇ ಹೆಚ್ಚಾಗಿ ತೊಡಗುವ ಮಕ್ಕಳು ಹಾಗೂ ಯುವಜನತೆ, ಪುಸ್ತಕ ಓದುವುದು‌ ಹಾಗೂ ಕೈಯಿಂದ ಬರೆಯುವುದು ಈಗ ತುಂಬ ಕಡಿಮೆ ಆಗಿರುವುದರಿಂದ ಹೀಗಾಗಿರಬೇಕು ಅನ್ನಿಸಿತು‌. ಅಧ್ಯಾಪಕರು ಚಿರಂತನ ಆಶಾವಾದಿಗಳಾಗಿರಬೇಕು ಎಂಬ ಹಿರಿಯರ ಮಾತನ್ನು ನೆನಪು ಮಾಡಿಕೊಂಡು, ಭರವಸೆಯಿಂದ ಉಕ್ತಲೇಖನ ಬರೆಸುವುದನ್ನು ಮುಂದುವರಿಸಿದೆ.