ಪರೀಕ್ಷೆ, ವಿದ್ಯಾರ್ಥಿ, ಮೌಲ್ಯಮಾಪನ ಈ ವಿಷಯಗಳ ಬಗ್ಗೆ ಮಾತಾಡುವಾಗ ನಾವೆಲ್ಲರೂ ಒಂದಲ್ಲ ಒಂದು ಸಲ ‘ಮಕ್ಕಿ ಕಾ ಮಕ್ಕಿ’ ಪದವನ್ನು ಕೇಳಿಯೇ ಇರುತ್ತೇವಲ್ಲವೆ? ಒಂದಕ್ಷರವನ್ನೂ ಬಿಡದೆ ನಕಲು ಮಾಡುವುದನ್ನು ಈ ಪದದಿಂದ ಸೂಚಿಸಲಾಗುತ್ತದೆ. ನೊಣ ಇದ್ದರೆ ಅದನ್ನೂ ಬಿಡದೆ ಹಾಗೇ ನಕಲು ಮಾಡಿಬಿಡುವುದು! ಸ್ವಂತಿಕೆ ಇಲ್ಲದೆ ಇನ್ನೊಬ್ಬರನ್ನು ಅನುಕರಿಸುವವರನ್ನು ಟೀಕಿಸಲು ಈ ಪದವನ್ನು ಬಳಸುತ್ತಾರೆ.
ಲೇಖಕಿ ಅನುಪಮಾ ಪ್ರಸಾದ್ ಅವರು ಬರೆದಿರುವ ‘ಕುಂತ್ಯಮ್ಮಳ ಮಾರಾಪು’ ಕಥೆ ಓದುತ್ತಿದ್ದಾಗ ‘ನೊಣಂಪ್ರತಿ’ ಅನ್ನುವ ಪದವನ್ನು ಓದಿದೆ, ಮಕ್ಕಿ ಕಾ ಮಕ್ಕಿ ಎಂಬ ಅರ್ಥದಲ್ಲಿ ಅವರು ಅದನ್ನು ಬಳಸಿದ್ದಾರೆ.
“ಕಾನೂನೇನೊ ತನ್ನ ಕೋರ್ಟ್ ರೂಮಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕೊಟ್ಟಿದೆ. ಆದರೆ ಅದನ್ನು ನೊಣಂಪ್ರತಿ ಪಾಲಿಸಿದರೆ ಕೆಲವೊಮ್ಮೆ ಮನೆ ನಂಬಿ ಕುಳಿತ ಗಂಡು ಮಕ್ಕಳು ಅಬ್ಬೇಪಾರಿಗಳಾಗಬೇಕಾದೀತು ಎಂಬಂತಿದೆ ನಮ್ಮ ಕೌಟುಂಬಿಕ, ಸಮಾಜಿಕ ವ್ಯವಸ್ಥೆ ಎಂದು ಮಾಲಿನಿ ಬಳಿ ಹೇಳಿದ್ದ ರಾಜಪ್ಪ”. ಅರೆ! ಎಷ್ಟು ಚೆನ್ನಾಗಿದೆ ಅಲ್ವ ಈ ನೊಣಂಪ್ರತಿ ಪದ ಅನ್ನಿಸಿತು.
ನಾವು ಕನ್ನಡಿಗರು ನಮ್ಮ ಭಾಷೆಯ ಶ್ರೀಮಂತಿಕೆಯನ್ನು ನೋಡಿ ಪರಸ್ಪರ ಹೇಳಿಕೊಂಡು ಸಂಭ್ರಮ ಪಡುವುದು ಬಹಳ ಖುಷಿ ಅಲ್ವಾ….