ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪಾಠ ಮಾಡಿರುವ ನನ್ನಂತಹ ಕನ್ನಡ ಅಧ್ಯಾಪಕರಿಗೆ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿರುತ್ತದೆ, ಎಂಬುದು ನನ್ನ ಅನಿಸಿಕೆ. ಅದೇನೆಂದರೆ, ಪ್ರಾಥಮಿಕ-ಪ್ರೌಢ-ಪದವಿಪೂರ್ವ- ಪದವಿ …. ಯಾವುದೇ ಹಂತವಾಗಲಿ, ಉತ್ತಮವಾಗಿ ಪಾಠ ಮಾಡುವ ಆಸೆಯುಳ್ಳ ಕನ್ನಡ ಅಧ್ಯಾಪಕರು ಮೊದಲು ವಿದ್ಯಾರ್ಥಿಗಳ ಮನವನ್ನು ಮುಟ್ಟುವ ಸೇತುವೆ ಕಟ್ಟಿಕೊಳ್ಳಬೇಕು; ಆಮೇಲಷ್ಟೇ ಪಾಠ ಮಾಡಬೇಕು. ‘ಈ ಅಧ್ಯಾಪಕರು ಸಹ ನನ್ನಂತೆ ಒಬ್ಬ ಮನುಷ್ಯರು, ಭಾವನೆಗಳಿರುವವರು, ಜೀವನದೊಂದಿಗಿನ ಹೋರಾಟದಲ್ಲಿ ನನ್ನ ಪಯಣಕ್ಕೆ ಅರ್ಥಪೂರ್ಣ ಬೆಂಬಲ ನೀಡಬಲ್ಲವರು’ ಎಂಬ ಮನೋಭಾವವು ವಿದ್ಯಾರ್ಥಿಗಳಲ್ಲಿ ಉಂಟಾಗುವಂತೆ ಅಧ್ಯಾಪಕರ ವರ್ತನೆ ಇರಬೇಕು.ಸಾಮಾನ್ಯವಾಗಿ ಕನ್ನಡ ತರಗತಿಗಳಲ್ಲಿ ಈ ಭಾವ ಸೇತುವೆ ನಿರ್ಮಾಣವಾಗಿರುತ್ತದೆ.
ವೈಯಕ್ತಿಕವಾಗಿ ನಾನು ಕೂಡ ನನ್ನ ವಿದ್ಯಾರ್ಥಿಗಳೊಂದಿಗೆ ಈ ಸೇತುವೆ ಕಟ್ಟಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತೇನೆ. ದೊಡ್ಡ ತರಗತಿ
ಕೊಠಡಿಯಲ್ಲಿ ಚದುರಿದ ಮೋಡಗಳಂತೆ ಎಲ್ಲೆಲ್ಲೋ ಕುಳಿತಿರುವ ಅವರನ್ನು ಮಂದಿನ ಮೊದಲ ಅಡ್ಡಪೀಠ(ಬೆಂಚು)ಗಳಿಂದಲೇ ಕುಳಿತುಕೊಳ್ಳಲು ಹೇಳುವುದು ಈ ಪ್ರಯತ್ನದ ಮೊದಲ ಹೆಜ್ಜೆ. ಪಾಠ ಮಾಡುತ್ತಿರುವಾಗ ಸೂಕ್ತ ಸಂದರ್ಭಗಳಲ್ಲಿ, ಪಾಠಕ್ಕೆ ಪ್ರಸ್ತುತವಾಗುವ ಜೀವನದ ಘಟನೆಗಳನ್ನು ಅವರಿಗೆ ಹೇಳುವುದು, ಆ ಮೂಲಕ ಪಾಠಕ್ಕೆ ಜೀವನವನ್ನು ಮತ್ತು ಜೀವನಕ್ಕೆ ಪಾಠವನ್ನು ಅನ್ವಯಿಸಲು ಅವರನ್ನು ಪ್ರೋತ್ಸಾಹಿಸುವುದು ಎರಡನೆಯ ಹೆಜ್ಜೆ. ಜನಪ್ರಿಯ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳು ನೋಡುವ ಸಿನಿಮಾ ಹಾಡು ನೋಡುವುದು, ಕೇಳುವುದು – ಅವರ ಸಂವೇದನೆ, ಭಾವನೆಗಳನ್ನು ಅರಿಯಲು ಪ್ರಯತ್ನಿಸುವುದು ಇನ್ನೊಂದು ಹೆಜ್ಜೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ, ಜ್ವಲಂತ ಸಮಸ್ಯೆಗಳ ಬಗ್ಗೆ, ಜೀವನಮೌಲ್ಯಗಳ ಬಗ್ಗೆ ತಾವು ಸ್ವಂತವಾಗಿ ಆಲೋಚಿಸಲು ಹೇಳಿ, ತರಗತಿಯಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಉತ್ತೇಜನ ನೀಡುವುದು ಮತ್ತೊಂದು ಹೆಜ್ಜೆ.
ಒಟ್ಟಿನಲ್ಲಿ ಈ ಸೇತುವೆ ಕಟ್ಟುವ ಪ್ರಯತ್ನವು ಕನ್ನಡ ತರಗತಿಗಳಲ್ಲಿ (ಹಾಗೆ ನೋಡಿದರೆ ಎಲ್ಲ ವಿಷಯದ ತರಗತಿಗಳಲ್ಲೂ) ನಡೆಯುತ್ತಲೇ ಇರಬೇಕಾಗುತ್ತದೆ. ಕೊನೆಗೂ ಅಧ್ಯಾಪಕರ ಗುರಿ ವಿದ್ಯಾರ್ಥಿಗಳ ಜೀವನವನ್ನು ಸಕಾರಾತ್ಮಕ ರೀತಿಯಲ್ಲಿ ಮುಟ್ಟುವುದೇ ಆಗಿರಬೇಕು, ಅಲ್ಲವೇ?