ನಾವು ಅಧ್ಯಾಪಕ ವೃತ್ತಿಯವರು ವಿದ್ಯಾರ್ಥಿಗಳೊಂದಿಗೆ ಒಡನಾಡುವಾಗ, ಕೆಲವೊಮ್ಮೆ ತುಸು ವಿನೋದಮಯ ಅನ್ನಬಹುದಾದ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತೇವೆ. ಕೆಲವು ದಿನಗಳ ಹಿಂದೆ ನಡೆದ ಇಂತಹ ಒಂದು ಪ್ರಸಂಗವನ್ನು ಇಲ್ಲಿ ಹೇಳುತ್ತಿದ್ದೇನೆ ನೋಡಿ. 

ನಾನು ಕನ್ನಡ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಮಹಾರಾಣಿ ಕಾಲೇಜಿನಲ್ಲಿ ಈಚೆಗೆ ಮೊದಲನೆಯ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಒಂದು ಕಿರುಪರೀಕ್ಷೆ ಕೊಟ್ಟಿದ್ದೆ. ಈ ಪರೀಕ್ಷೆಗೆ ಸಂಬಂಧಿಸಿದ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಮೂರು ಉತ್ತರಪತ್ರಿಕೆಗಳು ಒಂದೇ ರೀತಿ ಇದ್ದು, ಈ ವಿದ್ಯಾರ್ಥಿನಿಯರು ಒಬ್ಬರಿಂದ ಒಬ್ಬರು ನಕಲು ಮಾಡಿದ್ದಾರೆ ಎಂಬುದು ನನಗೆ ಅರಿವಾಯಿತು. ಆ ಮೂರು ಮಕ್ಕಳನ್ನು ಕರೆಸಿ ಮತ್ತೆ ಖಾಲಿ ಹಾಳೆ ಕೊಟ್ಟು ದೂರ ದೂರ ಕೂರಿಸಿ ಅದೇ ಪ್ರಶ್ನೆಗೆ ಉತ್ತರ ಬರೆಸಿದಾಗ ಅವರಲ್ಲಿ ಇಬ್ಬರು  ನಕಲು ಮಾಡಿದ್ದಾರೆ ಎಂಬುದು ನನಗೆ ಗೊತ್ತಾಯಿತು. ಈ ತಪ್ಪನ್ನು ಅವರು ಮುಂದೆ ಪುನರಾವರ್ತಿಸಬಾರದು ಎಂಬ ಕಾರಣಕ್ಕಾಗಿ ಒಂದು ಕ್ಷಮಾಪಣಾ ಪತ್ರ ಹಾಗೂ ಒಂದಷ್ಟು ಬರವಣಿಗೆ-ಕೆಲಸವನ್ನು ಕೊಟ್ಟು, ಅವರ ತಂದೆ ಅಥವಾ ತಾಯಿಯಿಂದ ಕ್ಷಮಾಪಣಾ ಪತ್ರಕ್ಕೆ ರುಜು ಮಾಡಿಸಿಕೊಂಡು, ಮಾರನೆಯ ದಿನ ತರುವಂತೆ ಹೇಳಿದೆ. 

ಮಾರನೆಯ ದಿನ ನನಗೊಂದು ಆಶ್ಚರ್ಯ ಕಾದಿತ್ತು. ಒಬ್ಬಳು ಹುಡುಗಿಯೇನೋ ಅವಳಿಗೆ ತಿಳಿದಂತೆ ಒಂದು ಕ್ಷಮಾಪಣಾ ಪತ್ರವನ್ನು ಬರೆದು ತಂದಿದ್ದಳು‌. ಆದರೆ ಇನ್ನೊಬ್ಬಳು ವಿದ್ಯಾರ್ಥಿನಿಯ ಕ್ಷಮಾಪಣಾ ಪತ್ರದ ಭಾಷೆ ಅವಳ ವಯಸ್ಸಿಗಿಂತ ತುಂಬ ಪ್ರೌಢವಾಗಿದ್ದು ಇದನ್ನು ಖಂಡಿತ ಇವಳು ಬರೆದಿರಲಿಕ್ಕಿಲ್ಲ ಎಂದು ನನಗೆ ಅನ್ನಿಸಿತು‌. ಏಕೆಂದರೆ ಹಿಂದಿನ ದಿನ ನಾನು ಎದುರಿಗೆ ಕೂರಿಸಿಕೊಂಡು ಬರೆಸಿದಾಗ ಅವಳ ಭಾಷೆಯಲ್ಲಿ ತುಂಬ ತಪ್ಪುಗಳಿದ್ದವು.‌ ಅದರ ಬಗ್ಗೆ ನನಗೆ  ತುಂಬ ಚಿಂತೆ ಕೂಡ ಆಗಿತ್ತು. ಆದರೆ ಇಂದು!? “ನೀವು ನನ್ನನ್ನು ಒಮ್ಮೆ ಕ್ಷಮಿಸಲಾಗಬಹುದೇ? ನಾನು ಮಾಡಿದ ಅಪಕೃತ್ಯವು ನನ್ನನ್ನು ದುಃಸ್ವಪ್ನದಂತೆ ಕಾಡುತ್ತಿದೆ.” ಎಂಬೆಲ್ಲ ವಾಕ್ಯಗಳು ಅವಳ ಕ್ಷಮಾಪಣಾ ಪತ್ರದಲ್ಲಿದ್ದವು!!  ನಾನು ಅವಳನ್ನು ಸತ್ಯ ಹೇಳುವಂತೆ ದೃಢಧ್ವನಿಯಲ್ಲಿ ಕೇಳಿದಾಗ ” ಸಾರಿ ಮ್ಯಾಮ್, ಇದು ನನ್ನ ಮಮ್ಮಿ ಬರೆದಿದ್ದು” ಅಂದಳು.  ” ಅಲ್ಲಮ್ಮಾ, ನೀನು ಕ್ಷಮಾಪಣಾ ಪತ್ರ ಬರೆದುಕೊಂಡು ಬಾ ಅಂದ್ರೆ ನಿನ್ನ ಅಮ್ಮನ ಹತ್ರ ಬರೆಸಿದ್ದೀಯಲ್ಲ.‌ ಅದೂ ಅಲ್ದೆ ನಿನ್ನ ಬರಹದಲ್ಲಿ ವಿಪರೀತ ತಪ್ಪುಗಳಿವೆ.‌ ಯಾಕಮ್ಮ? ಪದವಿಪೂರ್ವ ತರಗತಿ, ಹತ್ತನೇ ತರಗತಿ ಇವೆಲ್ಲ ಹೇಗೆ ಪಾಸಾದೆ ನೀನು?” ಎಂದು ಕೇಳಿದೆ. “ಪಿಯೂಸೀಲಿ ನಲ್ವತ್ತು ಮಾರ್ಕು ಬಂತು ಮ್ಯಾಮ್,  ಎಸ್ಸೆಸ್ಸೆಲ್ಸಿಯಲ್ಲಿ ನಾನು ಕೊರೋನಾ ಬ್ಯಾಚು”  ಅಂದಳು!! “ಅದು ಹೋಗ್ಲಿ, ಇಷ್ಟೊಂದು ತಪ್ಪು ಯಾಕೆ ಬರೀತೀಯ? ನಿನ್ನ ಮಾತೃಭಾಷೆ ಯಾವುದು? ಕನ್ನಡಾನ, ಬೇರೆನಾ? ” ಅಂದೆ ನಾನು. “ನನ್ನ ಮದರ್ ಟಂಗ್ ಕನ್ನಡ, ಆದ್ರೆ ಫಾದರ್ ಟಂಗ್ ತಮಿಳ್ ಮ್ಯಾಮ್”  ಅಂದಳು ನನ್ನ ವಿದ್ಯಾರ್ಥಿನಿ ಶಿರೋಮಣಿ! ‘ಫಾದರ್ ಟಂಗ್’ ಅನ್ನುವ ಪದವನ್ನು ಅವಳು ಗಂಭೀರ ಭಾಷಾ ಶಾಸ್ತ್ರೀಯ ಹಿನ್ನೆಲೆಯಿಂದೇನೂ ಅಲ್ಲದೆ ಥಟ್ಟನೆ ಸಹಜಸ್ಫೂರ್ತವಾಗಿ ಬಳಸಿದ ರೀತಿಯು ನನಗೆ ತುಸು ನಗೆ ಮತ್ತು ಅಚ್ಚರಿ ಎರಡನ್ನೂ ತಂದಿತು!

ಹಿಂದಿನ ಕಾಲದಲ್ಲಿ  Father tongue (ಪಿತೃಭಾಷೆ) ಪದವನ್ನು ಭಾಷಾಶಾಸ್ತ್ರದಲ್ಲಿ ಮಗುವಿನ ತಾಯಿಯ ಭಾಷೆ ಮತ್ತು ತಂದೆಯ ಭಾಷೆ ಬೇರೆಯಾಗಿದ್ದಾಗ ಬಳಸುತ್ತಿದ್ದರು‌‌. ಆದರೆ ಈಗ ಆ ಪದದ ಬಳಕೆಯನ್ನು ಗಂಭೀರ ಅಧ್ಯಯನಗಳಲ್ಲಿ ನಾವು ಕಾಣಲಾಗುವುದಿಲ್ಲ. ಪ್ರಸ್ತುತ  L1, L2 ಎಂಬ ಪದಗಳಿಂದ ಮಗುವಿನ ಮಾತೃಭಾಷೆ, ಪಿತೃಭಾಷೆಗಳನ್ನು ಗುರುತಿಸುತ್ತಾರೆ. ಆದರೆ ನಮ್ಮ‌ ‘ಕೊರೋನಾ ಬ್ಯಾಚ್’ ವಿದ್ಯಾರ್ಥಿನಿ ‘ಫಾದರ್ ಟಂಗ್’ ಎಂಬ ಪದವನ್ನು ಥಟ್ಟನೆ ಅಂದರೆ ಹೆಚ್ಚು ಯೋಚಿಸದೆ ಬಳಸಿದ್ದಳು ಅಷ್ಟೇ. ‌