ನಾನು ವಿದ್ಯಾವರ್ಧಕ ಸಂಘ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ಓದುತ್ತಿದ್ದಾಗ, ಉತ್ತಮ ಕರ್ತವ್ಯ ಪ್ರಜ್ಞೆಯಿದ್ದ ಕನ್ನಡ ಅಧ್ಯಾಪಕಿಯೊಬ್ಬರು ನಮಗೆ ಪಾಠ ಮಾಡುತ್ತಿದ್ದರು. ಮಧ್ಯಮ ಎತ್ತರದ, ತುಸು ಸ್ಥೂಲ ಎನ್ನಬಹುದಾದ ದೇಹದ, ಕೆಂಪೊಡೆಯುವಷ್ಟು ಬಿಳಿ ಬಣ್ಣ ಹೊಂದಿದ್ದು ಮಧ್ಯವಯಸ್ಸು ಮೀರುತ್ತಿದ್ದ ಹಿರಿಯರು ಆಕೆ. ಪಾಠ ಮಾಡುವಾಗ ತುಂಬ ಬಿಗಿಯಾಗಿರುತ್ತಿದ್ದರು, ನಗುತ್ತಿರಲಿಲ್ಲ. ಅವರು ಬಹುತೇಕ ಕನ್ನಡ ಪದಗಳನ್ನೇ ಪಾಠದಲ್ಲಿ ಮಾತ್ರವಲ್ಲ, ತಮ್ಮ ಆಡುಮಾತಿನಲ್ಲೂ ಬಳಸುತ್ತಿದ್ದರು (ಈಗ ಸಮಯ ಎಷ್ಟು? … ಯಾಕೆ ತರಗತಿಗೆ ತಡವಾಗಿ ಬಂದೆ? … ಐವತ್ನಾಲ್ಕನೇ ಪುಟ ತೆಗೀರಿ …. ಹೀಗೆ). ಅವರ ವಯಸ್ಸು ಮತ್ತು ಗಂಬೀರ ಸ್ವಭಾವದಿಂದಾಗಿ ನಮಗೆ ಅವರನ್ನು ಕಂಡರೆ ಭಯವಾಗುತ್ತಿತ್ತು.

ಬಹುಶಃ ಪದವಿಪೂರ್ವ ಶಿಕ್ಷಣದ ಎರಡನೆಯ ವರ್ಷದಲ್ಲಿ ಅನ್ನಿಸುತ್ತೆ, ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ `ಕರ್ವಾಲೊ’(ಕಾದಂಬರಿ) ನಮಗೆ ಪಠ್ಯವಾಗಿತ್ತು. ಕರ್ವಾಲೊ ಎಂಬ ವಿಜ್ಞಾನಿಯೊಬ್ಬರು ನಿರೂಪಕ, ಹಳ್ಳಿ ಗಮಾರನಾದರೂ ಕಾಡಿನ ಜೀವಿಗಳ ಬಗ್ಗೆ ಅಂತಃಸ್ಫುರಿತ ತಿಳುವಳಿಕೆ ಹೊಂದಿದ್ದ ಮಂದಣ್ಣ ಮತ್ತು ಇನ್ನು ಕೆಲವು ಹಳ್ಳಿಗರ ಜೊತೆ, `ಹಾರುವ ಓತಿ’ ಎಂಬ, ಜೀವವಿಕಾಸಕ್ಕೆ ಮುಖ್ಯಕೊಂಡಿಯಾದ ಸರೀಸೃಪವೊಂದನ್ನು, ಮೂಡಿಗೆರೆಯ ಸಮೀಪದ ಚಾರ್ಮಾಡಿ ಕಾಡಿನಲ್ಲಿ ಪತ್ತೆ ಮಾಡಲು ಪ್ರಯತ್ನಿಸುವುದರ ಕಥನವೇ ಕರ್ವಾಲೊ ಕಾದಂಬರಿ. ಪರಿಸರ, ಅದರ ನಿಗೂಢತೆ, ಮನುಷ್ಯರ ಚಿತ್ರವಿಚಿತ್ರ ವರ್ತನೆಗಳ ವರ್ಣನೆ, ಅಂತರ್ಗತ ವಿವರಗಳನ್ನು ಹೇಳುವ ಕ್ರಮದಲ್ಲಿಯೇ ಅಲ್ಲಿನ ಹಾಸ್ಯಮಯತೆಯನ್ನು ತೋರಬಲ್ಲ ಲೇಖಕರ ವಿಶಿಷ್ಟ ಭಾಷಾಪ್ರತಿಭೆ – ಇವೆಲ್ಲವುಗಳಿಂದಾಗಿ ಎಲ್ಲಾ ವಯಸ್ಸಿನ, ಎಲ್ಲಾ ಕಾಲದ ಓದುಗರಿಗೂ ಇಷ್ಟವಾಗುವ ಕಾದಂಬರಿ ಇದು. ಇದರಲ್ಲಿ ಮಂದಣ್ಣನ ಮದುವೆಯ ಪ್ರಸಂಗ ಬರುತ್ತದೆ. ಮದುವೆಯ ಗೀಳು ಹತ್ತಿಸಿಕೊಂಡು, ತಾನು  ಮಾಡಬೇಕಾದ ಕೆಲಸವನ್ನೆಲ್ಲ ನಿರ್ಲಕ್ಷಿಸುತ್ತಾ ಯಾವಾಗ ಮದುವೆಯಾದೇನೋ ಎಂದು ಕಾಯುವ ಮಂದಣ್ಣ ಮತ್ತು ನಗೆ ಹುಟ್ಟಸುವ ಅವನ ಮದುವೆ ಮೆರವಣಿಗೆಯ ವರ್ಣನೆ ….. ಇದು ಆ ಕಾದಂಬರಿಯಲ್ಲಿ ಬರುವ ಅತ್ಯಂತ ಹಾಸ್ಯಮಯ ಪ್ರಸಂಗಗಳಲ್ಲಿ ಒಂದು.

ಈಗ ವಿಷಯಕ್ಕೆ ಬರುತ್ತೇನೆ. ಸದಾ ಗಂಭೀರವಾಗಿ ಪಾಠ ಮಾಡುತ್ತಾ, ತುಸು ಭಯ, ತುಸು ಎಚ್ಚರದ ಮನಃಸ್ಥಿತಿಯಲ್ಲೇ ನಮ್ಮನ್ನು ಯಾವಾಗಲೂ ಇಟ್ಟಿರುತ್ತಿದ್ದ ನಮ್ಮ ಕನ್ನಡ ಅಧ್ಯಾಪಕಿ, ಮಂದಣ್ಣನ ಮದುವೆಯ ಈ ಪ್ರಸಂಗ ಬರುತ್ತಿದ್ದಂತೆಯೇ, ಅದು ಎಲ್ಲಿತ್ತೋ ಅಷ್ಟು ನಗೆ ಎನ್ನಿಸುವಂತೆ ತಡೆಯಲಾರದಂತೆ ನಗಲು ಪ್ರಾರಂಭಿಸಿದರು. ಅವರ ಬಿಳಿಬಿಳಿ ಮುಖ ನಗೆಯಿಂದ ಕೆಂಪುಕೆಂಪಾಗಲು ಶುರುವಾಯಿತು. ಪಾಠ ಓದಲಾರದಷ್ಟು ನಗು ಅವರಿಗೆ! ನಮಗೂ ನಗು ಬಂದು ಎಲ್ಲರೂ ನಗಲಾರಂಭಿಸಿ ತರಗತಿಯ ವಾತಾವರಣ ತಿಳಿಯಾಯಿತು. ಈ ಸನ್ನಿವೇಶವು ನಮ್ಮ ಅಧ್ಯಾಪಕಿಯೊಳಗಿದ್ದ ಒಂದು `ನಗಬಲ್ಲ ಮನಃಸ್ಥಿತಿ’ಯನ್ನು ತೋರಿದ್ದು ಮಾತ್ರವಲ್ಲದೆ ತೇಜಸ್ವಿಯವರ ಅತ್ಯಾಕರ್ಷಕ ಬರವಣಿಗೆಯ ಶೈಲಿಯ ಕಡೆಗೂ ನಮ್ಮ ಗಮನ ಸೆಳೆಯಿತು. ನಮ್ಮಲ್ಲಿ ಅನೇಕರು ನಂತರ ತೇಜಸ್ವಿಯವರ ಸಾಹಿತ್ಯದ ಅಭಿಮಾನಿಗಳಾಗಿಬಿಟ್ಟದ್ದು ಈ `ನಗು ಸನ್ನಿವೇಶ’ದ ಪರಿಣಾಮವೇ ಇರಬಹುದೇನೋ ಎಂದು ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ.