ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ. ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ ನಿಘಂಟು ನೋಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟಿನಲ್ಲಿ ಅಗಲ್, ಅಗಲು ಎಂಬ ಪದಗಳಿಗೆ ಬೇರೆ ಅರ್ಥಗಳ ಜೊತೆಗೆ ನಾಮಪದವಾದಾಗ ಊಟದ ತಟ್ಟೆ, ತಾಟು ಎಂಬ ಅರ್ಥಗಳಿವೆ!
ಹಾಗೇ ಯೋಚಿಸುತ್ತಾ ಹೋದಂತೆ ಊಟದ ತಟ್ಟೆಯನ್ನು ನಮ್ಮ ಕನ್ನಡ ನಾಡಿನಲ್ಲಿ ಎಷ್ಟೆಲ್ಲ ಹೆಸರುಗಳಿಂದ ಕರೆಯುತ್ತಾರಲ್ಲ ಅನ್ನಿಸಿತು. ಗಂಗಳ, ಗಂಗಾಳ, ತಣಿಗೆ, ತಳಿಗೆ, ತಾಟು, ಥಾಲಿ ……. ಇನ್ನು ಮಂಗಳೂರು ಕಡೆಯಲ್ಲಿ ಇದೇ ಊಟದ ತಟ್ಟೆಯನ್ನು ಬಟ್ಟಲು ಎಂದು ಕರೆಯುತ್ತಾರೆ!!
ಅಂತೂ ನಮ್ಮ ಕನ್ನಡ ನಾಡಿನಲ್ಲಿ ಊಟಗಳಲ್ಲಿ ಎಷ್ಟು ವೈವಿಧ್ಯ ಇದೆಯೋ ಅದನ್ನು ಹಾಕುವ ತಟ್ಟೆಯ ಹೆಸರಿನಲ್ಲೂ ಅಷ್ಟೇ ವೈವಿಧ್ಯವಿದೆಯಲ್ಲ!!