ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು.
‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ ನಿಘಂಟಿನಲ್ಲಿ ಇರುವ ಅನೇಕ ಅರ್ಥಗಳಲ್ಲಿ ‘ಧಾರಾಳ ಸ್ವಭಾವದ’ ಎಂಬ ಅರ್ಥವು ಜನರ ಮಾತಿನಲ್ಲಿ ಹೆಚ್ಚಾಗಿ ಅನ್ವಯವಾಗುತ್ತದೆ.
ಒಂದು ದೀರ್ಘ, ಒಂದು ಕೊಂಬು, ಒಂದು ಅನುಸ್ವಾರದಂತಹ ಸಣ್ಣದೆನ್ನಿಸುವ ಸಂಗತಿಗಳು ಭಾಷೆಯಲ್ಲಿ ಮಾಡುವ ದೊಡ್ಡ ವ್ಯತ್ಯಾಸಗಳನ್ನು ನೆನೆದರೆ ಭಾಷೆ ಎಷ್ಟು ಮೃದುಲ ಮತ್ತು ಸೂಕ್ಷ್ಮವಾದದ್ದು ಅನ್ನಿಸುತ್ತೆ. ಬಹುಶ: ಅದು ತೊಟ್ಟಿಲಲ್ಲಿ ಮುದ್ದಾಗಿ ಮಲಗಿರುವ ಎರಡು-ಮೂರು ತಿಂಗಳ ಹಸುಗೂಸಿದ್ದಂತೆ. ಆ ಎಳೆಮಗುವಿನ ಕೆನ್ನೆಯನ್ನು ಮುಟ್ಟುವಾಗ, ಎಲ್ಲಿ ನೋವಾಗುತ್ತದೋ ಎಂದು ಜಾಗ್ರತೆ ವಹಿಸುತ್ತಾ ಮೃದುವಾಗಿ ಮುಟ್ಟುತ್ತೇವೋ ಅಷ್ಟೇ ಮೃದುವಾಗಿ ಬಹುಶಃ ನಾವು ಭಾಷೆಯನ್ನು ಮುಟ್ಟಬೇಕೇನೋ. ಅತ್ಯತ್ತಮ ಕವಿಗಳಿಗೆ ಈ ಗುಟ್ಟು ಗೊತ್ತಿರುವುದರಿಂದಲೇ ಬಹುಶಃ ಅವರು ಬಳಸುವ ಭಾಷೆಯು, ಸೂಕ್ತ ಅರ್ಥಗಳ ಮುತ್ತಿನ ಹಾರವಾಗಿ ಚಂದಗೊಂಡು ಒಂದು ಅಮೂಲ್ಯ, ಅನರ್ಘ್ಯ, ಚಿರಂತನ ಕಲಾಕೃತಿಯಾಗುತ್ತೆ ಅನ್ನಿಸುತ್ತದೆ.