ಹದಿನೇಳರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆ ಅಂದರೆ ಪದವಿ ಹಂತದಲ್ಲಿರುವ ಕಿಶೋರ ಕಿಶೋರಿಯರಿಗೆ ಕನ್ನಡ ಪಾಠ ಮಾಡುವ ಅಧ್ಯಾಪಕರ ಒಂದು ದೊಡ್ಡ ತಲೆನೋವೆಂದರೆ, ಆ ವಿದ್ಯಾರ್ಥಿಗಳು ಮಾಡುವ ಅಕ್ಷರ ತಪ್ಪುಗಳು. ಅಲ್ಪಪ್ರಾಣ – ಮಹಾಪ್ರಾಣ, ಹೃಸ್ವಾಕ್ಷರ – ದೀರ್ಘಾಕ್ಷರ, ಅಕಾರ-ಹಕಾರ, ವಿಭಕ್ತಿ ಪ್ರತ್ಯಯಗಳಲ್ಲಿನ ಅನೇಕ ದೋಷಗಳು, ಲೇಖನ ಚಿಹ್ನೆಗಳಿಲ್ಲದೆ ಬರೆಯುವುದು, ಹೇಳಿ ಬರೆಸುತ್ತಿರುವಾಗ ಪದಗಳನ್ನೇ ಬಿಟ್ಟುಬಿಡುವುದು… ರಾಮಾ ರಾಮಾ….ಈ ಪಟ್ಟಿ ಬಹು ಉದ್ದವಾದುದು. ತರಗತಿಯಲ್ಲಿ ಪಾಠವಿಷಯಗಳನ್ನು ಬರೆಸುವಾಗ ಅಥವಾ ಪರೀಕ್ಷೆಯ ಅವರ ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಈ ದೋಷಗಳು ಕಿಕ್ಕಿರಿದು ಅವುಗಳನ್ನು ಓದುವ ಅಧ್ಯಾಪಕರ ಮನಸ್ಸಿಗೆ ತುಂಬ ಕಿರಿಕಿರಿ, ಹಿಂಸೆ ಆಗುತ್ತವೆ. ಜೊತೆಗೆ, ‘ಈ ಮಕ್ಕಳ ಭವಿಷ್ಯದ ಕನ್ನಡದ ಸ್ಥಿತಿ ಏನಪ್ಪಾ, ದೇವರೇ’ ಎಂಬ ಚಿಂತೆ ಕೂಡ ಮೂಡುತ್ತದೆ. \
ಈ ಗಂಭೀರ ಸಮಸ್ಯೆಗೆ ಹಲವಾರು ಕಾರಣಗಳಿವೆ. ಪ್ರಾಥಮಿಕ, ಪ್ರೌಢ ಶಾಲಾ ಹಂತಗಳಲ್ಲಿ ಸರಿಯಾದ ಉಚ್ಚಾರ, ಬರವಣಿಗೆ ಕಲಿಯದಿರುವುದು, ಪದವಿಪೂರ್ವ ಹಂತದಲ್ಲಿ ಭಾಷೆಗಳ ಬಗ್ಗೆ ಮೂಡುವ ನಿರ್ಲಕ್ಷ್ಯ, ಹದಿವಯಸ್ಸಿನ ಚಂಚಲತೆಯಿಂದಾಗಿ ತರಗತಿಯಲ್ಲಿ ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳದೆ ಏನೋ ಒಂದು ಬರೆಯುವುದು, ತೀರಾ ನಿಧಾನವಾಗಿ ಬರೆಯುವುದು … ಹೀಗೆ.
ಈ ದೋಷಪಟ್ಟಿ ಮಾಡುವುದಕ್ಕಿಂತ ತುಂಬ ಕಷ್ಟಕರ ವಿಷಯ ಅಂದರೆ ಇವನ್ನು ತಿದ್ದುವುದು. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಸಂಪೂರ್ಣ ಹಾಗೂ ಶ್ರದ್ಧಾವಂತ ಭಾಗವಹಿಸುವಿಕೆ ಇಲ್ಲದಿದ್ದರೆ ಪದವಿ ಹಂತದಲ್ಲಿ ಬರವಣಿಗೆಯ ದೋಷವನ್ನು ತಿದ್ದುವುದು ಅಸಾಧ್ಯ. ಚಂಚಲತೆ, ನಿರ್ಲಕ್ಷ್ಯದಿಂದ ಉಂಟಾಗುವ ತಪ್ಪುಗಳನ್ನು ತಿಳುವಳಿಕೆ ಹೇಳಿ ಹೇಗಾದರೂ ತಿದ್ದಬಹುದು, ಆದರೆ ಮೂಲ ಪದಗಳನ್ನು ಬರೆಯುವಾಗಲೇ ಆಗುವ ತಪ್ಪುಗಳು ಮತ್ತು ವ್ಯಾಕರಣದ ದೋಷಗಳನ್ನು ತಿದ್ದುವುದು ಖಂಡಿತ ಸುಲಭವಲ್ಲ. ಮೊದಲು ಅವರ ಉಚ್ಚಾರ ತಿದ್ಸುವುದು, ಅಧ್ಯಾಪಕರ ಕೋಣೆಗೆ ಬರಹೇಳಿ ಅಆಇಈಯಿಂದ ಶುರುಮಾಡಿ ಪದಗಳನ್ನು, ವಾಕ್ಯಗಳನ್ನು ಮತ್ತೆ ಮತ್ತೆ ತಿದ್ದಿಸುವುದು, ಅವರು ಮಾಡುವ ವ್ಯಕ್ತಿ ವಿಶಿಷ್ಟ ತಪ್ಪುಗಳ ಕಡೆ ಗಮನ ಸೆಳೆದು ಅವುಗಳನ್ನು ತಿದ್ದಿಕೊಳ್ಳಲು ಸೂಚಿಸುವುದು, ನಿತ್ಯವೂ ಸುದ್ದಿ ಪತ್ರಿಕೆಗಳನ್ನು ಓದಲು ಹೇಳುವುದು, ವಾರಪತ್ರಿಕೆ, ಮಾಸಪತ್ರಿಕೆ, ಸಾಹಿತ್ಯ ಕೃತಿಗಳ ಓದಿನ ಪ್ರಾಮುಖ್ಯತೆಯ ಕಡೆ ಅವರ ಗಮನ ಸೆಳೆಯುವುದು, ಪುಸ್ತಕಗಳನ್ನು ಕೊಟ್ಟು ಓದಿಸುವುದು, ರತ್ನಕೋಶವನ್ನು ನಿಯಮಿತವಾಗಿ ಬಳಸಲು ಹೇಳುವುದು ….ಓಹ್… ಇಂತಹ ಹತ್ತು ಹಲವು ವಿಧಾನಗಳನ್ನು ಅನುಸರಿಸಿ ಕನ್ನಡ ಅಧ್ಯಾಪಕರು ವಿದ್ಯಾರ್ಥಿಗಳ ಬರವಣಿಗೆಯನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ. ಆದರೆ ಇದರಲ್ಲಿ ಸಿಗುವ ಯಶಸ್ಸಿನ ಅಂಶ 20-30 % ಮಾತ್ರ. ಏಕೆಂದರೆ ನೀರು ಕುಡಿಯಲು ಇಚ್ಛೆ ಇಲ್ಲದ ಕುದುರೆಗೆ ನೀರು ಕುಡಿಸಲು ಸಾಧ್ಯವೇ? ಹದಿಮೂರು ವರ್ಷದಿಂದ ಆಗಿರುವ ತಪ್ಪನ್ನು ಹದಿಮೂರು ದಿನದಲ್ಲಿ ಸರಿ ಮಾಡಲು ಸಾಧ್ಯವೇ?
ಅಂತೂ ಈ ಹಿಂಸೆಯನ್ನು ಅನುಭವಿಸುವುದು ಕನ್ನಡ ಅಧ್ಯಾಪಕರ ವೃತ್ತಿಯ ಭಾಗವಾಗಿಬಿಟ್ಡಿರುವುದು ನಮ್ಮ ಶೈಕ್ಷಣಿಕ ಕ್ಷೇತ್ರದ ಒಂದು ದುರಂತ.