ಈಚೆಗೆ ಮೈಸೂರಿನಲ್ಲಿ ಒಳ್ಳೆಯ ಹೋಟಲೆಂದು ಖ್ಯಾತವಾಗಿರುವ ಪಂಚವಟಿ ಎಂಬ ಹೋಟಲಿಗೆ ಬಂಧುಮಿತ್ರರ ಜೊತೆ ನಾನು ಕೆಲ ದಿನಗಳ ಹಿಂದೆ ಹೋಗಿದ್ದೆ. ನಮ್ಮ ಪಕ್ಕದ ಮೇಜಿನಲ್ಲಿ ಮೂರು ಜನ ಯುವ ಹರೆಯದವರು ಕುಳಿತಿದ್ದರು. ಅದರಲ್ಲಿ ನನಗೆ ತೀರ ಹತ್ತಿರವಿದ್ದ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಹುಡುಗಿ ಕನ್ನಡ ಬಲ್ಲವಳು. ಉಳಿದಿಬ್ಬರು ಹುಡುಗರು ತೆಲುಗು, ತಮಿಳು ಮಾತಾಡುವವರು ಅನ್ನಿಸಿತು. ಅವರನ್ನು ನೋಡಿದರೆ ವಿದ್ಯಾರ್ಥಿಗಳಿರಬೇಕು ಅನ್ನಿಸುತ್ತಿತ್ತು. ಖುಷಿಯಾಗಿ ಅವರು ಮಾತಾಡುತ್ತಿದ್ದರು, ಅಕ್ಕ ಪಕ್ಕದವರಿಗೆ ಅವರ ಉಲ್ಲಾಸದ ಮಾತುಗಳು ಕೇಳಿಸುತ್ತಿದ್ದವು.
ಮಾತಾಡುತ್ತಾ ಆ ಹುಡುಗರು ‘ವ್ಹಾಟ್ ಈಸ್ ದಿಸ್ ಪಂಚವಟಿ? ವ್ಹಾಟ್ ಡಸ್ ಇಟ್ ಮೀನ್?’ ಎಂದು ಆ ಹುಡುಗಿಯನ್ನು ಕೇಳಿದರು. ಅವಳು ‘ ಪಂಚವಟಿ ಮೀನ್ಸ್ ಫೈವ್ ಹೌಸಸ್’ ಅಂದಳು. ವಟಿಯನ್ನು ಕುಟಿ ಎಂದುಕೊಂಡಳೋ ಏನೋ( ಪರ್ಣಕುಟಿ ಪದವನ್ನು ನೆನಪಿಸಿಕೊಳ್ಳಿ – ಎಲೆಮನೆ ಎಂದು ಅದರ ಅರ್ಥ). ಇನ್ನೂ ಏನೇನೋ ಹೇಳಹೋಗುತ್ತಿದ್ದ ಆ ಹುಡುಗಿಗೆ ತಾನು ತಪ್ಪು ಹೇಳುತ್ತಿದ್ದೇನೆ ಎಂಬುದು ಅರಿವಾಗಲೇ ಇಲ್ಲ.
ಯಾಕೋ ನನ್ನೊಳಗಿನ ಅಧ್ಯಾಪಕಿಗೆ ಸುಮ್ಮನಿರಲು ಆಗಲಿಲ್ಲ. ”ನೋಡಮ್ಮ, ಪಂಚವಟಿ ಅಂದ್ರೆ ಐದು ಆಲದ ಮರ ಅಂತ ಅರ್ಥ. ರಾಮ ಸೀತೆ ವನವಾಸದಲ್ಲಿ ಇದ್ದಾಗ ವಾಸಿಸಿದ ಎರಡನೆಯ ಸ್ಥಳದ ಹೆಸರು ಅದು. ಮೊದಲನೆಯದು ಚಿತ್ರಕೂಟ” ಅಂತ ಅವಳಿಗೆ ಹೇಳಿದೆ ನಾನು. ಅವಳು ಏನು ಓದುತ್ತಿದ್ದಾಳೆಂದು ನಾನು ವಿಚಾರಿಸಿದಾಗ ‘ಎಂ.ಎಸ್ಸಿ. ಬಾಟನಿ ಓದುತ್ತಿದ್ದೇನೆ’ ಅಂದಳು ಆ ಹುಡುಗಿ.
ನಮ್ಮ ದೇಶದ ಅತ್ಯಂತ ಮುಖ್ಯ ಪುರಾಣವಾದ ರಾಮಾಯಣದೊಳಗಿನ ಜನಪ್ರಿಯ ಪದವೊಂದರ ಅರ್ಥ ನಮ್ಮ ಯುವ ಪೀಳಿಗೆಗೆ ಗೊತ್ತಿಲ್ಲ! ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿಗೆ ವಟ, ಪಂಚವಟಿ ಪದಗಳ ಅರ್ಥ ಗೊತ್ತಿಲ್ಲ! ಪೋಷಕರಾಗಿ, ಅಧ್ಯಾಪಕರಾಗಿ ನಾವೆಲ್ಲಿ ತಪ್ಪಿದ್ದು ಎಂಬ ಚಿಂತೆ ಮತ್ತೊಮ್ಮೆ ನನ್ನನ್ನು ಕಾಡಲಾರಂಭಿಸಿದೆ.
Like us!
Follow us!