ಈಗ ಬರೆಯುತ್ತಿರುವ ಪ್ರಸಂಗವು ಒಬ್ಬ ಕನ್ನಡ ಪ್ರಾಧ್ಯಾಪಕಿಯಾಗಿ ನನಗೆ ತುಂಬ ಬೇಸರ ಹುಟ್ಟಿಸಿದ ಪ್ರಸಂಗ. ನಾನು ಕೆಲಸ ಮಾಡುತ್ತಿರುವ ಕಾಲೇಜಿನ ನಮ್ಮ ಕನ್ನಡ ವಿಭಾಗಕ್ಕೆ ಈಚೆಗೆ ಒಬ್ಬ ವಿದ್ಯಾರ್ಥಿನಿ ಬಂದಿದ್ದಳು. ಸದ್ಯದಲ್ಲಿ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅವಳು. ನಾಲ್ಕನೇ ಅರ್ಧವರ್ಷದ ಅಂತಿಮ ಕನ್ನಡ ಪರೀಕ್ಷೆಯಲ್ಲಿ ಅವಳಿಗೆ 100 ಕ್ಕೆ 38 ಅಂಕ ಬಂದು ತಾನು ನಪಾಸಾಗಿದ್ದಳು( ಉತ್ತೀರ್ಣರಾಗಲು 100 ಕ್ಕೆ 40 ಅಂಕ ಬರಬೇಕು). ಅವಳಿಗೆ ಸಿಕ್ಕಿದ ಕನ್ನಡ ಆಂತರಿಕ ಪರೀಕ್ಷೆಯ ಅಂಕ( 16) ಗಳನ್ನು 18 ಮಾಡಲು ಸಾಧ್ಯವೇ ಎಂದು ಕೇಳಲು ಬಂದಿದ್ದು ಅವಳು! “ಪ್ಲೀಸ್ ಮ್ಯಾಮ್ ಪ್ಲೀಸ್……ಇನ್ನು ಎರಡು ಮಾರ್ಕ್ಸ್ ಕೊಟ್ಬಿಡಿ” ಎಂದು ಗೋಗರೆದಳು ಪಾಪ.
ನೋಡಲು ಮುದ್ದಾಗಿ ಬೊಂಬೆಯ ಹಾಗಿದ್ದ, ಆದರೆ ಈಗ ಮುಖ ಸಪ್ಪೆ ಮಾಡಿಕೊಂಡು ಬೇಡುತ್ತಾ ನಿಂತಿದ್ದ ಆ ಹುಡುಗಿಯ ಬಗ್ಗೆ ಅಯ್ಯೋ ಪಾಪ ಅನ್ನಿಸಿದರೂ ನಾನು ಅವಳಿಗೆ ಈ ‘ಸಹಾಯ’ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ, ಒಂದು ಸಲ ವಿಶ್ವವಿದ್ಯಾಲಯದ ಪರೀಕ್ಷೆಯ ಫಲಿತಾಂಶ ಬಂದು ಅಂಕಪಟ್ಟಿ ಪ್ರಕಟವಾದ ಮೇಲೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಇದನ್ನು ಅವಳಿಗೆ ತಿಳಿಸಿದಾಗ ‘ನಾನು 60 ಅಂಕಕ್ಕೆ ಬರೆಯುವ (ಅರ್ಧವರ್ಷಾಂತ್ಯದ) ಪರೀಕ್ಷೇನ ಚೆನ್ನಾಗೇ ಬರೆದಿದ್ದೆ, ಬರೀ 22 ಅಂಕ ‘ ಕೊಟ್ಟಿದ್ರು’, ಆಮೇಲೆ ರೀವ್ಯಾಲ್ಯುಯೇಷನ್ಗೆ (ಮರು ಮೌಲ್ಯಮಾಪನಕ್ಕೆ) ಅರ್ಜಿ ಹಾಕಿದ್ದೆ, ಅದಾದ್ಮೇಲೂ ಮೇಲೂ 22ಏ ಅಂಕ ‘ಕೊಟ್ರು’ ಮ್ಯಾಮ್” ಎಂದು ಬಹು ಬೇಸರದಿಂದ ಹೇಳಿದಳು. ನಾನು “ಅಲ್ಲಮ್ಮ, ಮರುಮೌಲ್ಯಮಾಪನ ಮಾಡಿಸೋ ಮುಂಚೆ ನಿನ್ನ ಉತ್ತರ ಪತ್ರಿಕೆಯ ನೆರಳಚ್ಚು ಪ್ರತೀನ ಕನ್ನಡ ವಿಭಾಗಕ್ಕೆ ತಂದು ತೋರಿಸಬಹುದಿತ್ತಲ್ಲ, ಯಾಕೆ ತರಲಿಲ್ಲ? ತೋರಿಸಿದ್ದರೆ ನಿಂಗೆ ಹೆಚ್ಚು ಅಂಕ ಬರ್ತಿತ್ತಾ, ಇಲ್ವಾ ಹೇಳಬಹುದಿತ್ತಲ್ಲಮ್ಮ ನಾವು?” ಅಂದೆ. ನಿರುತ್ತರಳಾದಳು ಆ ವಿದ್ಯಾರ್ಥಿನಿ. “ಮತ್ತೆ ಪರೀಕ್ಷೆ ಕಟ್ಟಿ ಬರೆದು ಪಾಸಾಗಮ್ಮ” ಅಂದ ನಾನು, ‘ಯಾಕೆ ಈ ಹುಡುಗಿ ನಪಾಸಾದಳು? ಅವಳ ಬರವಣಿಗೆ ಗಮನಿಸೋಣ’ ಅನ್ನಿಸಿ ಆ ಕೂಡಲೇ ಅವಳಿಂದ ನಾಲ್ಕು ಸಾಲು ಕನ್ನಡ ಉಕ್ತಲೇಖನ ಬರೆಸಿದೆ. ಭಗವಂತಾ…! ಅವಳು ಬರೆದಿದ್ದು ನೋಡಿ ನನಗೆ ಮೂರ್ಛೆ ಹೋಗುವಂತಾಯಿತು!! ಆ ಹುಡುಗಿ ನಾಲ್ಕು ಸಾಲಿನಲ್ಲಿ ಕಡಿಮೆ ಅಂದರೆ ಇಪ್ಪತ್ತು ತಪ್ಪು ಮಾಡಿದ್ದಳು! ಹೃಸ್ವಾಕ್ಷರ, ದೀರ್ಘಾಕ್ಷರ, ಒತ್ತಕ್ಷರ, ಸಂಯುಕ್ತಾಕ್ಷರ, ಲೇಖನ ಚಿಹ್ನೆ….ಎಲ್ಲದರಲ್ಲೂ ತಪ್ಪು. ಇವಳು ನಪಾಸಾಗಿದ್ದರಲ್ಲಿ ಏನೂ ಆಶ್ಚರ್ಯವಿರಲಿಲ್ಲ.
ಬೇಸರದ ಸಂಗತಿ ಅಂದರೆ ಸರ್ಕಾರಿ ಕಾಲೇಜುಗಳಲ್ಲಿ 80-90-100 ಮಕ್ಕಳಿರುವ ತರಗತಿಗಳಿಗೆ ಪಾಠ ಮಾಡುವ ನಾವು, ಅಂದರೆ ಕಾಲೇಜು ಪ್ರಾಧ್ಯಾಪಕರು ಪ್ರತಿ ಮಗುವಿನ ಬರವಣಿಗೆಯನ್ನೂ ವೈಯಕ್ತಿಕವಾಗಿ ಗಮನಿಸುವುದು ಸಾಧ್ಯ ಆಗುವುದಿಲ್ಲ. ಅವರಾಗಿ ಬಂದು ಕೇಳಿದಾಗ ಅಥವಾ ಕೆಲವು ಸಂದರ್ಭಗಳಲ್ಲಿ ನಾವು ಅವರ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಭಾಗಕ್ಕೆ ಕರೆದು ತಪ್ಪು ತಿದ್ದುತ್ತೇವೆ, ಬರೆಯಲು ಕಲಿಸುತ್ತೇವೆ ನಿಜ. ಆದರೆ, ತಮ್ಮ 17-18-19 ನೇ ವಯಸ್ಸಿನಲ್ಲಿರುವ ವಿದ್ಯಾರ್ಥಿಗಳಿಗೆ ಒಂದನೇ ತರಗತಿ ಮಟ್ಟದ ಅಕ್ಷರಾಭ್ಯಾಸ ಮಾಡಿಸಿ, ಪದವಿ ಮಟ್ಟದ ಉತ್ತರಗಳನ್ನು ಬರೆಯಲು, ಅರ್ಧವರ್ಷದ ಮೂರು- ನಾಲ್ಕು ತಿಂಗಳ ಕುದುರೆ ಓಟದ ಪಾಠಸಮಯದಲ್ಲಿ ತಯಾರು ಮಾಡುವುದು ಮನುಷ್ಯಮಾತ್ರರಿಗೆ ಸಾಧ್ಯ ಆಗುವ ಕೆಲಸವೇನು!?
ಆ ಬೆಳಿಗ್ಗೆಯಲ್ಲಿ ಎರಡು ಅಂಕಕ್ಕಾಗಿ ಗೋಗರೆಯುತ್ತಾ ನಿಂತ ವಿದ್ಯಾರ್ಥಿನಿಯ ಮುಖ ಮತ್ತೆ ಮತ್ತೆ ಕಣ್ಣ ಮುಂದೆ ಬಂದಾಗಲೆಲ್ಲ, ‘ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡುವಲ್ಲಿ ನಾವು ಎಲ್ಲೆಲ್ಲಿ ತಪ್ಪುತ್ತಿದ್ದೇವೆ, ಏನೇನು ಹೊಸ ವಿಧಾನ ಅನುಸರಿಸಿ ನಾವು ಅವರನ್ನು ತಿದ್ದಬೇಕು’ ಎಂದು ಮತ್ತೆ ಮತ್ತೆ ಆಲೋಚಿಸುತ್ತೇನೆ.