ಬೆಳಿಗ್ಗೆ ಎದ್ದು ಅಡುಗೆ ಮಾಡುವುದು ಅಂದರೆ ‘ಕುಕ್ಕರಿಡುವುದು’ ಎಂಬಷ್ಟರ ಮಟ್ಟಿಗೆ ಪ್ರೆಶರ್ ಕುಕ್ಕರ್ ನಮ್ಮ ಜೀವನದ ಭಾಗ ಆಗಿಬಿಟ್ಟಿದೆ, ಅಲ್ಲವೆ? ಅಡಿಗೆ ಕೆಲಸದ ಸಮಯ, ಚಿಂತೆಗಳನ್ನು ಕಡಿಮೆ ಮಾಡುವ ಈ ಅಡುಗೆ ಉಪಕರಣವನ್ನು ಬಳಸದ ಮನೆಗಳು ನಮ್ಮ ನಾಡಿನಲ್ಲಿ ಅಪರೂಪ ಅನ್ನಬಹುದು.
ಒತ್ತಡ ಹೆಚ್ಚಿಸಿ, ಆ ಮೂಲಕ ತಾಪಮಾನವನ್ನು ಹೆಚ್ಚಿಸಿ ಅಡುಗೆಯು ಬೇಗ ಆಗುವ ತಂತ್ರಜ್ಞಾನವನ್ನು ಕಂಡುಹಿಡಿದದ್ದು 1679 ರಲ್ಲಿ, ಫ್ರಾನ್ಸ್ ನ ಡೇನಿಸ್ ಪಾಪಿನ್ ಎಂಬ ಭೌತಶಾಸ್ತ್ರಜ್ಞರು. ಇದನ್ನು ಸ್ಟೀಮ್ ಡೈಜೆಸ್ಟರ್, ಪಾಪಿನ್ಸ್ ಡೈಜೆಸ್ಟರ್ ಎಂದು ಕರೆಯಲಾಗುತ್ತಿತ್ತು. ಆ ಉಪಕರಣವು ಕಾಲದಿಂದ ಕಾಲಕ್ಕೆ ನಾನಾ ರೂಪಗಳನ್ಬು ತಾಳಿ, ಇಂದು ಅತ್ಯಂತ ಜನಪ್ರಿಯ ಅಡುಗೆ ಉಪಕರಣ ಆಗಿಬಿಟ್ಟಿದೆ.
ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ನಾಡಿನ ಮನೆಗಳಲ್ಲಿ ಬಳಸುವ ಈ ‘ಪ್ರೆಶರ್ ಕುಕ್ಕರ್’ ಎಂಬ ಅತಿಪರಿಚಿತ ವಸ್ತುವಿಗೆ ಕನ್ನಡ ಪದ ಯಾವುದಿರಬಹುದು, ಎಂಬ ಪ್ರಶ್ನೆಯು ಆಗಾಗ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ನನ್ನ ಹತ್ತಿರ ಇರುವ ಉತ್ತಮ ನಿಘಂಟುಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯದ ‘ಇಂಗ್ಲಿಷ್ – ಕನ್ನಡ ನಿಘಂಟು’ ಈ ವಿಷಯದಲ್ಲಿ ನನ್ನ ಸಹಾಯಕ್ಕೆ ಬಂತು. ಅದರಲ್ಲಿ cooker ಎಂಬ ಪದಕ್ಕೆ ‘ಅಡುಪಾತ್ರೆ’, ‘ಪಾಕಿ’ ಎಂಬ ಎರಡು ಪದಗಳು ಸಿಕ್ಕವು! ಪಾಕಿ ಎಂಬ ಪದ ಗಮಕಿ, ವಾಕಿ-ಟಾಕಿ, ಪಿನಾಕಿ ಎಂಬ ಪದಗಳನ್ನು ನೆನಪಿಸುತ್ತೆ ಅಲ್ಲವೆ? ಪಾಕಿಸ್ತಾನದ ಪ್ರಜೆಗಳನ್ನು ಕೆಲವರು ಪಾಕಿಗಳು ಎಂದು ಆಡುಮಾತಿನಲ್ಲಿ ಕರೆಯುವುದುಂಟು!
ಇರಲಿ. ಪಾಕಕ್ಕೆ ಬಳಸುವ ಉಪಕರಣ ಪಾಕಿ! ಇನ್ನು, ಅಡುಗೆಗೆ ಬಳಸುವ ಪಾತ್ರೆ ಅಡುಪಾತ್ರೆ! ಅಡುಪಾತ್ರೆ ಅಥವಾ ‘ಒತ್ತಡ ಪಾಕಿ’ ಎಂಬ ಪದಗಳನ್ನು ಪ್ರೆಶರ್ ಕುಕ್ಕರ್ ಪದಕ್ಕೆ ಸಂವಾದಿಯಾಗಿ ಬಳಸಬಹುದೇ ಕನ್ನಡ ಬಂಧುಗಳೇ? ನಿಮ್ಮ ಅನಿಸಿಕೆಯನ್ನು ಖಂಡಿತ ತಿಳಿಸಿ.
Like us!
Follow us!