ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಒಂದು ಕಿರಿಕಿರಿಯ ಸಂದರ್ಭ ಎದುರಾಗುತ್ತದೆ. ಅದೇನೆಂದರೆ ಹನುಮಂತನ ಬಾಲದಷ್ಟು ಉದ್ದುದ್ದ ವಾಕ್ಯಗಳನ್ನು ಓದುವ ಸನ್ನಿವೇಶ. ಎಷ್ಟೋ ಸಲ ವಚನ, ಕಾಲ, ಪ್ರಥಮ ಪುರುಷ, ಲೇಖನ ಚಿಹ್ನೆ ಮುಂತಾದ ವ್ಯಾಕರಣ ನಿಯಮಗಳೆಲ್ಲಾ ಗಾಳಿಗೆ ತೂರಲ್ಪಟ್ಟು ಆ ಉದ್ದಾನುದ್ದ ವಾಕ್ಯವು ಅರ್ಥಹೀನವಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಜಾಯಮಾನ ಚಿಕ್ಕ ಚಿಕ್ಕ ವಾಕ್ಯಗಳದ್ದಲ್ಲವೇ ಎಂಬ ವಿಷಯ ಮನಸ್ಸಿಗೆ ಪ್ರಧಾನವಾಗಿ ಭಾಸವಾಗುತ್ತದೆ. ಉದಾಹರಣೆಗೆ ನಾವು ಸಂಭಾಷಣೆಗಳಲ್ಲಿ ಬಳಸುವ ವಾಕ್ಯಗಳನ್ನು ಗಮನಿಸಿ.
ಏನ್ಸಮಾಚಾರ?
ಊಟ ಆಯ್ತಾ?
ಇವತ್ತು ರಜೆ ಇಲ್ವಾ ನಿಮ್ಗೆ?
ಇಲ್ಲಪ್ಪ, ನಮ್ಮನೆ ಹತ್ರ ಮಳೆ ಬರ್ಲಿಲ್ಲ.
ಸ್ವಲ್ಪ ನಿಧಾನವಾಗಿ ಗಾಡಿ ಓಡಿಸ್ಬಾರ್ದಾ?
ಹೌದು. ಕರೆ ಮಾಡಿದ್ದೆ.
ಬೇಡ, ಅಷ್ಟೊಂದ್ ಕೊಡ್ಬೇಡಿ, ಖರ್ಚಾಗಲ್ಲ.
ಮೇಲ್ಕಂಡ ವಾಕ್ಯಗಳಲ್ಲಿ ಎರಡು, ಮೂರು ಅಥವಾ ನಾಲ್ಕು ಪದಗಳು, ಕೆಲವು ಸಲ ಒಂದೇ ಪದ ಇರುವುದನ್ನು ನಾವು ಗಮನಿಸಬಹುದು. ಅದೇ ಇಂಗ್ಲಿಷ್ ಭಾಷೆಯ ಜಾಯಮಾನವನ್ನು ಗಮನಿಸಿದರೆ ಅದರಲ್ಲಿ ಉದ್ದುದ್ದ ವಾಕ್ಯಗಳಿರುತ್ತವೆ ; ಅದರಲ್ಲೂ ಬರವಣಿಗೆಯ ವಿಷಯದಲ್ಲಿ ಈ ಮಾತು ಹೆಚ್ಚು ನಿಜ. ಇಂಗ್ಲಿಷ್ನಿಂದ ಕನ್ನಡಕ್ಕೆ ನಾವು ಅನುವಾದಿಸುವಾಗ ಅದರ ಒಂದು ವಾಕ್ಯವನ್ನು ಕನ್ನಡದ ಮೂರು ನಾಲ್ಕು ವಾಕ್ಯಗಳಾಗಿ ಭಾಗ ಮಾಡಿಕೊಳ್ಳುವ ಸನ್ನಿವೇಶ ಬರುತ್ತದೆ! ಒಟ್ಟಿನಲ್ಲಿ, ಒಬ್ಬ ಕನ್ನಡ ಅಧ್ಯಾಪಕಿಯಾಗಿ ನನಗೆ ನಮ್ಮ ಮಕ್ಕಳಿಗೆ, ಕನ್ನಡ ವ್ಯಾಕರಣದ ರಾಜ್ಯದಲ್ಲಿ ಪುಟ್ಟ ಪುಟ್ಟ ವಾಕ್ಯಗಳ ಆಳ್ವಿಕೆ ಇದೆ ಎಂಬುದನ್ನು ಕಲಿಸುವುದು ಮುಖ್ಯ ಅನ್ನಿಸಿದೆ.