ಸುಮಾರು 34-35 ವರ್ಷಗಳ ಹಿಂದೆ, ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು. ಈ ಲೇಖಕಿ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು.
25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ ಮಾತ್ರ ತನ್ಮಯರಾಗಿ, ಹೇಗೆ, ಹಿರಿಯರಾಗಿದ್ದ ಭೀಷ್ಮಾಚಾರ್ಯರನ್ನು ಕುರುಕ್ಷೇತ್ರ ಯುದ್ಧಕ್ಕೆ ಸೇನಾಪತಿಯನ್ನಾಗಿ ನೇಮಿಸಿದ್ದಕ್ಕೆ, ಆತುರ ಸ್ವಭಾವದ ಯುವಕನಾಗಿದ್ದ ಕರ್ಣನು ಅಸಮಾಧಾನ ವ್ಯಕ್ತ ಪಡಿಸಿದ, ಅವನನ್ನು ಭೀಷ್ಮರು ಹೇಗೆ ಸಮಾಧಾನಿಸಿದರು ಎಂದು ವಿವರಿಸುತ್ತಿದ್ದರು. ಭೀಷ್ಮರು ಆಡಿದ ಮುತ್ತಿನಂತಹ ಒಂದು ಮಾತು ಇದು – ‘ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್’. ‘ಮಹಾ ಯುದ್ಧರಂಗದಲ್ಲಿ ಸರದಿ ಬರುತ್ತದೆ ಕಣಪ್ಪ’ ಎಂಬುದು ಈ ಮಾತಿನ ಹೊಸಗನ್ನಡ ಅರ್ಥ. ಕೌರವರು ಹೇಗೂ ಮಾಡುತ್ತಿರುವುದು ಅಧರ್ಮ ಯುದ್ದ. ಅವರಿಗೆ ದೈವಸಹಾಯವೂ ಇಲ್ಲ. ಹೀಗಾಗಿ ಒಬ್ಬರಾದ ಮೇಲೆ ಒಬ್ಬರು ಸೇನಾಪತಿಗಳು ಯುದ್ಧದಲ್ಲಿ ಸೈನ್ಯವನ್ನು ಮುನ್ನಡೆಸಬೇಕು – ಸೋಲಬೇಕು/ಸಾಯಬೇಕು, ಆಗ ಮತ್ತೊಬ್ಬ ಸೇನಾಪತಿಯು ಅವರ ಸ್ಥಾನವನ್ನು ಪಡೆಯಬೇಕು. ಹೀಗೆ ತಾನು, ದ್ರೋಣಾಚಾರ್ಯ, ಕೃಪಾಚಾರ್ಯ ಮುಂತಾದ ಹಿರಿಯರ ನಂತರ ಕರ್ಣನ ಸರದಿ ಬಂದೇ ಬರುತ್ತದೆ ಎಂಬುದು ಅವರ ಈ ಮಾತಿನ ಒಳಾರ್ಥ. ಮಹಾಭಾರತದ ಒಂದು ರುದ್ರಸತ್ಯ ಇದು.
ಜನ ತಮಗೆ ಸಿಗಬೇಕಾದ ಸ್ಥಾನಮಾನಗಳ ಬಗ್ಗೆ ತುಂಬ ಧಾವಂತ, ಆತುರ ತೋರಿದಾಗ ‘ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್” ಎಂಬ ಉಕ್ತಿಯನ್ನು ನಾಣ್ಣುಡಿಯಂತೆ, ಗಾದೆಮಾತಿನಂತೆ ಬಳಸಲಾಗುತ್ತದೆ. ಪಂಪ ಎಷ್ಟು ಪ್ರತಿಭಾವಂತ ಎಂದು ನಾವು ಅರಿಯಲು ಇದೊಂದು ಮಾತು ಸಾಕಲ್ಲವೇ. ಪಂಪನನ್ನು ಹೀಗೆ ಪರಿಚಯಿಸಿದ್ದಕ್ಕೆ ನಾನು ನಮ್ಮ ಶಾಂತಾ ನಾಗರಾಜ್ ಮೇಡಂ ಅವರಿಗೆ ಚಿರಋಣಿ.