ಈ ನಡುವೆ ನಮ್ಮ ಮನೆಗೆ ಚಾಮರಾಜನಗರದ ಕಡೆಯ ಪರಿಚಿತರೊಬ್ಬರು ಬಂದಿದ್ದರು. ರಾತ್ರಿ ಮಲಗಿಕೊಂಡಿದ್ದು ಬೆಳಿಗ್ಗೆ ಅವರು ಎದ್ದಾಗ, ಸ್ನಾನ ಮಾಡಲು ಹೊರಟವರು ‘ಒಂದು ವಲ್ಲಿಬಟ್ಟೆ ಇದ್ರೆ ಕೊಡ್ತೀರಾ?’ ಎಂದು ಕೇಳಿದರು. ನನಗೆ ತಕ್ಷಣ ಅರ್ಥ ಆಗಲಿಲ್ಲ. ‘ಹಾಗಂದ್ರೆ?’ ಎಂದು ಕೇಳಿದೆ. “ಅದೇ ಸ್ನಾನ ಮಾಡಿ ಮೈ ಒರೆಸ್ಕೋತೀವಲ್ಲ, ಅದು” ಅಂದರು. ಅಲ್ಲೇ ಇದ್ದು ಇದನ್ನು ಕೇಳಿಸಿಕೊಂಡ ನಮ್ಮನೆಯವರು “ಟವಲ್ ಕೇಳ್ತಿದಾರೆ ಕಣೆ, ಕೊಡು” ಅಂದರು. ಅರೆ! ಟವೆಲ್ ಗೆ ‘ವಲ್ಲಿಬಟ್ಟೆ’ ಅನ್ನುತ್ತಾರಾ! ನನಗೆ ಅಚ್ಚರಿ ಆಯ್ತು.
ಮಂಗಳೂರಿನ ನನ್ನ ಬಾಲ್ಯಕಾಲದಲ್ಲಿ ಸ್ನಾನ ಮಾಡಿ ಮೈಒರೆಸಿಕೊಳ್ಳುವ ಜಾಳುಜಾಳಾದ ನೂಲುಬಟ್ಟೆಗೆ ಆ ಕಡೆಯ ಜನರು ‘ಬೈರಾಸ’, ‘ಬೈರಾಸು’ ಅನ್ನುತ್ತಿದ್ದುದು ನನಗೆ ನೆನಪಾಯಿತು. ವಿಶೇಷ ಅಂದರೆ ಅಲ್ಲಿ ಕೈವರೆಸಿಕೊಳ್ಳುವ ಚಿಕ್ಕ ಬಟ್ಟೆ ಅಂದರೆ ಕರವಸ್ತ್ರಕ್ಕೆ ಟುವಾಲು ಅನ್ನುತ್ತಾರೆ! ಪ್ರಸಿದ್ಧ ಕನ್ನಡ ಕಥೆಗಾರ್ತಿ ವೈದೇಹಿಯವರ ‘ಅಮ್ಮಚ್ಚಿಯೆಂಬ ನೆನಪು’ ಕಥೆ ಓದಿದವರಿಗೆ, ಸದಾ ಅಮ್ಮಚ್ಚಿಯ ಕೈಯಲ್ಲಿರುವ ‘ಟುವಾಲು’ ನೆನಪಾಗಬಹುದು.
ಪೂಜೆ, ಸಮಾರಂಭಗಳಲ್ಲಿ ಗಂಡಸರು ಪಂಚೆ ಉಟ್ಟ ನಂತರ ಮೈಮೇಲೆ ಹೊದ್ದುಕೊಳ್ಳುವ ಬಟ್ಟೆಗೆ ವಲ್ಲಿ, ಉತ್ತರೀಯ ಅನ್ನುವ ಹೆಸರಿರುವುದು ನನಗೆ ಗೊತ್ತಿತ್ತು. ನಮ್ಮ ಜನಪದ ಗೀತೆಗಳಲ್ಲಿ ವರ್ಣಿಸಲಾದಂತೆ, ಆಗಷ್ಟೇ ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸಿಕೊಡುವಾಗ ‘ವಲ್ಲಿಯ ಮುಸುಕಲ್ಲಿ ಕಣ್ಣೀರಿಡುವ’ ತಂದೆಯ ಚಿತ್ರ ಮನ ಕರಗಿಸುವಂಥದ್ದು. ಗಮನಿಸಬೇಕಾದ ಇನ್ನೊಂದು ವಿಷಯ ಅಂದರೆ ವಲ್ಲಿಗೆ ಬಳ್ಳಿ ಅನ್ನುವ ಇನ್ನೊಂದು ಅರ್ಥ ಸಹ ಇದೆ, ಸ್ವರ್ಣವಲ್ಲಿ, ಶ್ರೀವಲ್ಲಿ….ಎಂಬಲ್ಲಿ ಈ ಅರ್ಥ ಅನ್ವಯವಾಗುತ್ತೆ.
ಇಂಗ್ಲಿಷ್ ನ towel ‘ಟವೆಲ್’ ಫ್ರೆಂಚ್ – ಜರ್ಮನ್ ಮೂಲದ ಪದವಂತೆ (toaille) – ಸ್ನಾನಕ್ಕೆ ಸಂಬಂಧಿಸಿದ ಪದ. ಇಂಗ್ಲಿಷರಿಂದ ಆಳಿಸಿಕೊಳ್ಳುವಾಗ ಈ ಪದವನ್ನು ನಾವು ಕನ್ನಡಕ್ಕೆ ಪಡೆದಿರಬಹುದು. ಟವೆಲ್ ಅನ್ನು ಸ್ನಾನಕ್ಕೆ ಮಾತ್ರವಲ್ಲದೆ ಉಡುಪಿನ ಭಾಗವಾಗಿ ಉಪಯೋಗಿಸುವ ರೂಢಿಯೂ ನಮ್ಮ ನಾಡಿನ ಅನೇಕ ಕಡೆಗಳಲ್ಲಿ ಇದೆಯಲ್ಲವೇ? ಲಿಂಗಾಯಿತರಲ್ಲಿ ‘ಶಲ್ಯ’ ಎಂಬ ಕೆಂಪುವಸ್ತ್ರವನ್ನು ಪೂಜೆಗೆ, ಅತಿಥಿಗಳನ್ನು ಸತ್ಕರಿಸುವುದಕ್ಕೆ ಬಳಸುತ್ತಾರೆ.
ಅಂತೂ ವಲ್ಲಿಬಟ್ಟೆ, ಬೈರಾಸ, ಟವೆಲ್ಲು, ಶಲ್ಯ, ಉತ್ತರೀಯ….ಇವೆಲ್ಲ ಸ್ನಾನ ಮತ್ತು ಮೈಮೇಲೆ ಹೊದೆಯುವ ಬಟ್ಟೆಯ ದ್ವಿಪಾತ್ರಾಭಿನಯ ಮಾಡುತ್ತವೆ ಎಂದಾಯ್ತು!
ಭಾಷೆಯ ಬಳ್ಳಿ ಹೇಗೆ ಬೆಳೆಯುತ್ತಲ್ಲ! ವಲ್ಲಿಬಟ್ಟೆಯಿಂದ ಶಲ್ಯದ ತನಕ….