ಈಚೆಗೆ ಮದುವೆ ಛತ್ರವೊಂದನ್ನು ಹುಡುಕುತ್ತಿದ್ದಾಗ ನನಗೆ ಆದ ಅನುಭವ ಇದು.
ಬೃಹತ್ ಬೆಂಗಳೂರಿನ ವಿಶಾಲ ವಿಸ್ತಾರದಲ್ಲಿ ಸ್ಥಳಗಳನ್ನು ಹುಡುಕುವುದು ಸುಲಭವೇನಲ್ಲ. ಬಂಧುಗಳ ಮದುವೆಯೊಂದಕ್ಕೆ ಆಹ್ವಾನ ಬಂದಿದ್ದು, ಬೆಂಗಳೂರೆಂಬೋ ಬೆಂಗಳೂರಿನಲ್ಲಿ, ನಾನು ಮತ್ತು ನನ್ನ ಮನೆಯವರು ನಮ್ಮ ಮಟ್ಟಿಗೆ ಅಪರಿಚಿತವಾದ ಪ್ರದೇಶದಲ್ಲಿ ಇದ್ದ ಆ ಮದುವೆ ಛತ್ರವನ್ನು ಹುಡುಕುತ್ತಿದ್ದೆವು. ಗೂಗಲ್ ರಾಯರು ನಮಗೆ ಮಾರ್ಗದರ್ಶನ ಮಾಡಲು ಸೋತಾಗ ಅಲ್ಲೇ ಓಡಾಡುತ್ತಿದ್ದ ಜನರ ಬಳಿ ‘ಆ ಛತ್ರ ಎಲ್ಲಿದೆ’ ಎಂದು ಕೇಳಿದೆವು. “ಅಲ್ಲೇ ಆ ಸ್ಕೂಲ್ ಪಕ್ಕ ಇದೆ ನೋಡಿ” ಎಂದು ಬೆರಳು ತೋರಿ ಹೇಳಿದರು. ಸರಿ. ಹಾಗೆಯೇ ಹೋದಾಗ ಅವರು ಹೇಳಿದ ಶಾಲೆ ಕಣ್ಣಿಗೆ ಬಿತ್ತು. ಆ ಶಾಲೆಯನ್ನು ದಾಟಿಕೊಂಡೇ ಛತ್ರಕ್ಕೆ ಹೋಗಬೇಕಿತ್ತು. ತುಂಬ ದೊಡ್ಡದಾಗಿದ್ದು ಬಹಳ ಹಳೆಯದೆಂಬಂತೆ ಕಾಣುತ್ತಿದ್ದ ಶಾಲೆಯ ಹೆಸರನ್ನು ಕುತೂಹಲಕ್ಕಾಗಿ ಓದಿದೆ ನಾನು. ಆ ಹೆಸರಿನ ಫಲಕದಲ್ಲಿದ್ದ ಒಂದು ಪದವು ನನ್ನ ಅಸಮಾಧಾನಕ್ಕೆ ಕಾರಣವಾಯಿತು. ’ವಿಧ್ಯಾ ಕೇಂದ್ರ’ಎಂಬ ಪದವದು. ವಿದ್ಯಾ ಎಂಬ ಪದವನ್ನು ವಿಧ್ಯಾ ಎಂದು ಬರೆದಿದ್ದರು. ಛೆ, ವಿದ್ಯೆ ನೀಡುವ ಕೇಂದ್ರವಾದ ಶಾಲೆಯ ಹೆಸರನ್ನೇ ತಪ್ಪಾಗಿ ಬರೆದಿದ್ದಾರಲ್ಲ!! ನನ್ನೊಳಗಿನ ಕನ್ನಡ ಅಧ್ಯಾಪಕಿಗೆ ಆಗ ಆದ ಬೇಸರ ಹೇಳತೀರದು. ಹೋಗಲಿ, ಶಾಲೆಯ ಒಳಗೆ ಹೋಗಿ ಇದನ್ನು ಸಂಬಂಧ ಪಟ್ಟವರ ಗಮನಕ್ಕೆ ತರೋಣ ಅಂದರೆ ಅಂದು ಭಾನುವಾರ. ಶಾಲೆಗೆ ರಜೆ. ಮನಸ್ಸು ತಡೆಯದೆ ಕೊನೆಗೆ ಅಲ್ಲಿದ್ದ ಕಾವಲುಗಾರನಿಗೇ ಈ ತಪ್ಪಿನ ಬಗ್ಗೆ ತಿಳಿಸಿ, ಪ್ರಾಂಶುಪಾಲರ ಗಮನಕ್ಕೆ ಅದನ್ನು ಅವಶ್ಯವಾಗಿ ತರಬೇಕೆಂದು ಹೇಳಿದೆ. ಅವನು “ಓಹ್…ಹೌದಲ್ಲ ಮೇಡಂ…ನನಗೂ ಇದ್ರಲ್ಲಿ ಏನೋ ತಪ್ಪಿದೆ ಅನ್ನಿಸ್ತಾ ಇತ್ತು. ಖಂಡಿತ ಹೇಳ್ತೀನಿ ಮೇಡಂ” ಅಂದ.
ಕಾವಲುಗಾರನಿಗೆ ಅವನು ನನಗೆ ಕೊಟ್ಟ ಮಾತು ನೆನಪಿರಬಹುದು, ಮತ್ತು ಆ ಶಾಲೆಯ ವ್ಯವಸ್ಥಾಪಕ ವರ್ಗದವರು ಈ ತಪ್ಪನ್ನು ಸರಿ ಮಾಡಿರಬಹುದೆಂದು ಆಶಿಸುತ್ತೇನೆ.