ಸಾಮಾನ್ಯವಾಗಿ ನಾನು ಕಾಲೇಜಿಗೆ ಹೋಗುವುದು ಸ್ಕೂಟರಮ್ಮ ಎಂದು ನಾನು ಮುದ್ದಿನಿಂದ ಕರೆಯುವ ದ್ವಿಚಕ್ರ ವಾಹನದಲ್ಲಿ. ಆದರೆ ಒಮ್ಮೊಮ್ಮೆ ಮೆಟ್ರೋ ರೈಲಿನಲ್ಲಿ ಹೋಗುವುದುಂಟು. ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ವಿಶ್ವೇಶ್ವರಯ್ಯ ನಿಲ್ದಾಣ ತಲುಪಿದವಳು ಮಳೆ ಬರುತ್ತಿದ್ದ ಕಾರಣ ನಿಲ್ದಾಣದ ಬಾಗಿಲಲ್ಲೇ ನಿಲ್ಲಿಸಿದ್ದ ಆಟೋರಿಕ್ಷಾ ಬಳಿ ಹೋಗಿ, ಚಾಲಕರನ್ನು ”ಮಹಾರಾಣಿ ಕಾಲೇಜಿಗೆ ಬರ್ತೀರಾ?” ಎಂದು ಕೇಳಿದೆ.
“ಸರಿ, ಬನ್ನಿ” ಅಂದ ಚಾಲಕರು ನಾನು ಕುಳಿತುಕೊಳ್ಳುತ್ತಿದ್ದಂತೆಯೇ ‘ಫೋನ್ ಪೇನಾ, ಕ್ಯಾಷಾ?’ ಅಂತ ಕೇಳಿದರು. ನಾನು ‘ಹಣ ಕೊಡ್ತೀನಪ್ಪ’ ಅಂದೆ. “ಹಣ! ನೀವು ಹಣ ಅಂತ ಪದ ಬಳಸಿದ್ರಿಂದ ನಂಗೆ ತುಂಬ ಖುಷಿ ಆಯ್ತು ಮೇಡಂ” ಅಂದ ಚಾಲಕರು ಉತ್ಸಾಹದಿಂದ ತಮ್ಮ ಮಾತನ್ನು ಮುಂದುವರಿಸಿದರು. “ನಂಗೆ ಕನ್ನಡ ಅಂದ್ರೆ ತುಂಬ ಇಷ್ಟ ಮೇಡಂ. ಮನೆಯಲ್ಲಿ ನಾನು ಕನ್ನಡ ಮಾತಾಡಲ್ಲ, ತೆಲುಗು ಮಾತಾಡೋದು. ಆದರೆ ನಾನು ಹುಟ್ಟಿ ಬೆಳೆದಿರೋದು ಬೆಂಗಳೂರಿನಲ್ಲಿ. ಅದಕ್ಕೇ ನಾನು ಕನ್ನಡವನ್ನ ತುಂಬ ಪ್ರೀತಿಸ್ತೀನಿ, ಗೌರವಿಸ್ತೀನಿ. ನಾವು ಮನೆಯಲ್ಲಿ ಯಾವ ಭಾಷೆ ಬೇಕಾದ್ರೂ ಮಾತಾಡೋಣ. ಆದರೆ ಹೊರಗಡೆ ಬಂದಾಗ ಆ ನೆಲದ ಭಾಷೆಯನ್ನ ಕಲಿತು ಮಾತಾಡ್ಬೇಕಲ್ವಾ ಮೇಡಂ ನಾವು? ” ಅಂದರು.
ಆ ಆಟೋ ಚಾಲಕರು ಉನ್ನತ ವಿದ್ಯಾಭ್ಯಾಸ ಮಾಡಿದವರಂತೆ ತೋರಲಿಲ್ಲ. ಆದರೆ ಅವರ ಚಿಂತನಾ ಸ್ಪಷ್ಟತೆ ನನ್ನ ಮನಮುಟ್ಟಿತು. ‘ಮಾತೃಭಾಷೆ – ಹಾಗೂ ಜೀವನ ಮಾಡುವ ನೆಲದ ಭಾಷೆ ಬೇರೆ ಆಗಿದ್ದಾಗ ಪ್ರಜೆಗಳು ಹೊಂದಿರಬೇಕಾದ ಭಾಷಾ ನೀತಿ’ ಯೆಂಬ ಗಂಭೀರ ಹಾಗೂ ಸಂಕೀರ್ಣ ವಿಷಯವನ್ನು, ಅದೆಷ್ಟು ಸರಳವಾಗಿ ಮತ್ತು ದ್ವಂದ್ವಕ್ಕೆಡೆಯಿಲ್ಲದಂತೆ ಸ್ಪಷ್ಟವಾಗಿ ಹೇಳಿದರಲ್ಲ! ಅವರ ಮಾತುಗಳಿಂದ ತುಂಬ ಸಂತೋಷ ಆಯಿತು ನನಗೆ. ‘ಮನೆಯಲ್ಲಿ ಮಾತೃಭಾಷೆ, ಮನೆಯಿಂದ ಆಚೆಗೆ ಬಂದಾಗ ಆ ನೆಲದ ಭಾಷೆ’. ಎಷ್ಟು ಸರಳ ಹಾಗೂ ಸಮತೋಲನವುಳ್ಳ ಭಾಷಾ ಚಿಂತನೆಯಲ್ಲವೇ ಇದು!
ಭಾರತೀಯರು ಅಷ್ಟೇ ಏಕೆ ಭಾಷೆಯನ್ನು ಬಳಸುವ ಪ್ರತಿಯೊಬ್ಬರೂ ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಬಹುಭಾಷಿಕ ಪರಿಸರಗಳಲ್ಲಿ ಭಾಷಾಬಳಕೆಯ ವಿಚಾರದ ಎಷ್ಟೆಲ್ಲ ಗೋಜಲುಗಳು ಪರಿಹರ ಆಗುತ್ತವಲ್ಲ ಎಂದು ನೆನೆದಾಗ ನನಗೆ ತುಂಬ ಅಚ್ಚರಿ ಮತ್ತು ಖುಷಿ ಆಯಿತು.
ಮುಖ್ಯವಾದ ಕನ್ನಡ ಚಿಂತನೆಯೊಂದಕ್ಕೆ ಮುಖಾಮುಖಿಯಾಗಿಸಿದ ಆ ಮಳೆಬೆಳಗು ನನ್ನ ನೆನಪಿನಲ್ಲಿ ಅಚ್ಚೊತ್ತಿದೆ. ಆ ಆಟೋಚಾಲಕ ವೃತ್ತಿಯಿಂದ ಆಟೋಚಾಲಕ ಆದರೆ ಪ್ರವೃತ್ತಿಯಿಂದ ಕನ್ನಡ ಚಿಂತಕ. ಧನ್ಯೆ ನೀ ಕನ್ನಡಮ್ಮ.
Like us!
Follow us!