ದೈನಂದಿನ ಜೀವನದಲ್ಲಿ ನಾವು ನಮ್ಮ ಸಹಜೀವಿಗಳಿಗೆ ಏನಾದರೂ ಕೊಟ್ಟಾಗ, ಸಹಾಯ ಮಾಡಿದಾಗ ಅವರು ಇಂಗ್ಲಿಷ್ನಲ್ಲಿ ‘ಥ್ಯಾಂಕ್ಯೂ’ ಅಂದರೆ ನಾವು ‘ ಯು ಆರ್ ವೆಲ್ಕಮ್, ‘ಮೆನ್ಷನ್ ನಾಟ್’, ಅಥವಾ ‘ಇಟ್ ಇಸ್ ಆಲ್ರೈಟ್’ ಎಂದು ಹೇಳುವುದು ವಾಡಿಕೆ. ಆದರೆ ಯಾರಾದರೂ ಕನ್ನಡದಲ್ಲಿ ಧನ್ಯವಾದ ಅಂತ ಹೇಳಿದರೆ ಅದಕ್ಕೆ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?
ಸಾಮಾನ್ಯವಾಗಿ ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದೆಂದು ತೋಚದೆ ‘ಥ್ಯಾಂಕ್ಯೂ’ ಅಂದೋ, ‘ಓಹ್ ಪರವಾಗಿಲ್ಲ’ ಅಂದೋ, ಅಥವಾ ನಕ್ಕು ತಲೆ ಅಲ್ಲಾಡಿಸಿಯೋ ಜನ ಸುಮ್ಮನಾಗಿಬಿಡುತ್ತಾರೆ. ನನಗೂ ಈ ಪುಟ್ಟ ಪ್ರಶ್ನೆ ಆಗಾಗ ಕಾಡುತ್ತಿತ್ತು. ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದು?
ಒಮ್ಮೆ ನಮ್ಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಕೊಂಡಾದ ಮೇಲೆ ಶಿಷ್ಟಾಚಾರದ ವಾಡಿಕೆಯಂತೆ ಅಲ್ಲಿನ ಖಜಾಂಚಿಗೆ ನಾನು ‘ಧನ್ಯವಾದ ಮೇಡಂ’ ಅಂದೆ. ಅವರು ಕೂಡಲೇ ‘ಸುಸ್ವಾಗತ’ ಅಂದರು. ನನಗೆ ಆಂ ಎಂದು ಕಣ್ಣರಳಿಸುವ ಹಾಗಾಯಿತು, ತುಸು ಅಚ್ಚರಿಯೂ ಆಯಿತು. ಸುಸ್ವಾಗತ ಪದವನ್ನು ಹೊಸ ಸಂದರ್ಭದಲ್ಲಿ ಬಳಸಿದ್ದಾರಲ್ಲ ಎಂದು! ಆ ಖಜಾಂಚಿ ಆ ಪದವನ್ನು ಹೇಳಿದ ರೀತಿ ನೋಡಿದರೆ ಹಾಗೆ ಹೇಳುವುದು ಅವರಿಗೆ ಹೊಸ ವಿಷಯವೇನಲ್ಲ ಅನ್ನಿಸಿತು. ಅವರು ಅದನ್ನು ರೂಢಿ ಮಾಡಿಕೊಂಡಿರಬೇಕು.
ಅಂದ ಹಾಗೆ, ಥ್ಯಾಂಕ್ಯೂ ಬದಲಿಗೆ ಸುಸ್ವಾಗತ ಪದವನ್ನು ಬಳಸುವುದನ್ನು ಕನ್ನಡಿಗ ಬಂಧುಗಳು ಅನುಮೋದಿಸಬಹುದೇ? …..ಈಗ ಈ ಪ್ರಶ್ನೆ ಕಾಡಲಾರಂಭಿಸಿದೆ!!