ಆ ಹಿರಿಯರನ್ನು ನಾನು ಮೊದಲು ನೋಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ನನ್ನ ಅಧ್ಯಯನದ ಸಲುವಾಗಿ, ಆಗ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿಲ್ಲದ, ಅನಕೃರ ಕೃತಿಗಳು ನನಗೆ ತುಂಬ ಜರೂರಾಗಿ ಬೇಕಿತ್ತು. ಈಗಿನ ತರಹ ಅಂತರ್ಜಾಲ ಸಂಪರ್ಕ, ವಿದ್ಯುನ್ಮಾನ ಪ್ರತಿ(ಸಾಫ್ಟ್ ಕಾಪಿ)ಗಳ ಕಾಲವಲ್ಲ ಅದು. ಹೀಗೇ ವಿಚಾರಿಸುತ್ತಿದ್ದಾಗ ಬೆಂಗಳೂರಿನ ವಿದ್ಯಾಪೀಠ ವೃತ್ತದ ಬಳಿ ಇರುವ ಒಬ್ಬ ವ್ಯಕ್ತಿಯ ಬಳಿ ಅನಕೃ ಅವರ ಸಮಗ್ರ ಕೃತಿಗಳ ಸಂಗ್ರಹ ಇದೆ ಎಂಬ ಮಾಹಿತಿ ಹಾಗೂ ಅವರ ಸ್ಥಿರದೂರವಾಣಿ(ಲ್ಯಾಂಡ್‌ಲೈನ್)ಯ ಸಂಖ್ಯೆ ನನಗೆ ಸಿಕ್ಕಿತು. ಆ ವ್ಯಕ್ತಿಗೆ ಕರೆ ಮಾಡಿ ಅವರಿಂದ ವಿಳಾಸ ಪಡೆದು, ಅವರ ಮನೆ ಹುಡುಕಿಕೊಂಡು ಹೊರಟೆ ನಾನು.

ಹುಡುಕುತ್ತಿದ್ದ ವಿಳಾಸದ ಮನೆಯ ಮುಂದೆ ನಿಂತಾಗ ನನಗೆ ಸಿಕ್ಕಿದ್ದು ಎತ್ತರವಿದ್ದ ಹಾಗೂ ತೆಳುಕಾಯದ ಅಂದಾಜು ಅರವತ್ತೈದು – ಎಪ್ಪತ್ತು ವಯಸ್ಸಿರಬಹುದು ಅನ್ನಿಸುವ ಒಬ್ಬ ಮಹನೀಯರು. `ಬನ್ನಿ’ ಎಂದು ನನ್ನನ್ನು ಆಹ್ವಾನಿಸಿದ ಅವರು, ಸಾಮಾನ್ಯ ಮಧ್ಯಮವರ್ಗದ ಮನೆಯಂತೆ ಭಾಸವಾಗುತ್ತಿದ್ದ, ಪಡಸಾಲೆ(ಹಾಲ್) ಹಾಗೂ ಎರಡು – ಮೂರು ಕೋಣೆಗಳಿದ್ದ ತಮ್ಮ ಮನೆಯ ಉಪ್ಪರಿಗೆಯ ಭಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ನನಗೆ ಕಂಡದ್ದೇನು!!? ಒಂದು ದೊಡ್ಡ ಪಡಸಾಲೆಯ ಮಧ್ಯೆ ಗೋಡೆಯ ಮೇಲೆ ಎದ್ದು ಕಾಣುವಂತೆ ಹಾಕಿದ್ದ, ದೊಡ್ಡದಾದ ಅನಕೃ ಅವರ ಭಾವಚಿತ್ರ. ಅನಕೃ ಬಗ್ಗೆ ಪೂಜ್ಯ ಭಾವ ಹುಟ್ಟಿಸುವಂತೆ ಇತ್ತು ಆ ಚಿತ್ರ ಮತ್ತು ಅದನ್ನು ಇರಿಸಿದ್ದ ರೀತಿ. ಆ ಚಿತ್ರದ ಸುತ್ತಲೂ ಇಡೀ ಕೋಣೆಯಲ್ಲಿ  ಪುಸ್ತಕಗಳನ್ನು ಜೋಡಿಸಿಡಲು ಗಾಜಿನ ಬಾಗಿಲಿದ್ದ ಕಪಾಟುಗಳ/ಗೋಡೆಗೂಡುಗಳ ವ್ಯವಸ್ಥೆ ಮಾಡಲಾಗಿತ್ತು. ತುಂಬ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದ ಆ ಪಡಸಾಲೆಯು ಒಂದು ಪುಸ್ತಕ ಪ್ರದರ್ಶನಕ್ಕೆ ಹೋದ ಭಾವನೆ ತರುತ್ತಿತ್ತು. ನಾನು ಅನಕೃ ಅವರ ಭಾವಚಿತ್ರವನ್ನೇ ತದೇಕಚಿತ್ತದಿಂದ ನೋಡುತ್ತಿದ್ದುದನ್ನು ಗಮನಿಸಿದ ಆ ಹಿರಿಯರು “ಅ.ನ.ಕೃಷ್ಣರಾಯರು ….. ಅವರು ನನ್ನನ್ನು ಮನುಷ್ಯರನ್ನಾಗಿ ಮಾಡಿದವರಮ್ಮಾ! ಇಲ್ಲಿರೋದು ಎಲ್ಲ ಅವರ ಪುಸ್ತಕಗಳೇ’’ ಅಂದರು. ಅವರ ಮಾತಿನಲ್ಲಿದ್ದ ಅಪಾರ ಗೌರವಭಾವ ಹಾಗೂ ಪುಸ್ತಕಗಳ ದೇಗುಲದಂತಿದ್ದ ಆ ವಾತಾವರಣಗಳು ನನ್ನಲ್ಲಿ ಬೆರಗು ಹಾಗೂ ಸಂತೋಷ ಎರಡನ್ನೂ ಮೂಡಿಸಿದವು. ನಂತರ ಅವರು ನನಗೆ ಅಗತ್ಯವಿದ್ದ ಅನಕೃ ಪುಸ್ತಕಗಳನ್ನು ಕೈಗಡ ಕೊಟ್ಟರು ಮತ್ತು ಆ ಮೂಲಕ ನನ್ನ ಅಧ್ಯಯನಕ್ಕೆ ಉಪಕರಿಸಿದರು. ಪುಸ್ತಕಗಳು ಸಿಗದಿದ್ದ ಆ ಕಾಲದಲ್ಲಿ ತಾವು ಜತನದಿಂದ ಕಾಪಾಡಿಕೊಂಡಿದ್ದ ಪುಸ್ತಕಗಳನ್ನು ನಂಬಿಕೆಯಿಂದ ನನಗೆ ಓದಲು ನೀಡಿದ ಆ ಹಿರಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ಅಂದ ಹಾಗೆ ಆ ಹಿರಿಯರ ಹೆಸರು ಶ್ರೀ ಟಿ.ವಿ.ಚಂದ್ರಶೇಖರನ್. ಅ.ನ.ಕೃಷ್ಣರಾಯರ ಮಹಾನ್ ಅಭಿಮಾನಿ ಎಂದೇ ಕನ್ನಡಪ್ರಿಯರು ಇವರನ್ನು ಗುರುತಿಸುತ್ತಾರೆ. ಇವರ ಮಗ ಶ್ರೀ ಶೇಷಾದ್ರಿ ವಾಸು. ಅಮೆರಿಕಾದಲ್ಲಿ ನೆಲೆಸಿದ ಗಣಕಯಂತ್ರಜ್ಞಾನಿಗಳಾದ ಇವರು ತೊಂಬತ್ತರ ದಶಕದಲ್ಲೇ ಕನ್ನಡಕ್ಕೆ ಬರಹ ಎಂಬ, ಕನ್ನಡ ಬರವಣಿಗೆಯ ಜನಪ್ರಿಯ ತಂತ್ರಾಂಶವನ್ನು ಕೊಡುಗೆಯಾಗಿ ನೀಡಿದವರು. ತನ್ನ ತಂದೆಯವರ ಕನ್ನಡಾಭಿಮಾನದ ಸಾರ್ಥಕ ವಾರಸುದಾರರಿವರು ಅಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು.

ಕನ್ನಡ ಕಾದಂಬರಿಯ ಹೆಗ್ಗುರುತು, ಕನ್ನಡದ ಕಟ್ಟಾಳು, ಅದ್ಭುತ ವಾಗ್ಮಿ ಅ.ನ.ಕೃಷ್ಣರಾಯರು ಎಂಬ ಬೆಳಕು ಅದೆಷ್ಟು ಕನ್ನಡಿಗರಿಗೆ ಬದುಕಿನ ಸ್ಫೂರ್ತಿಯಾಗಿದೆ ಎಂದು ನೆನೆದಾಗ ಮನಸ್ಸು ತುಂಬಿ ಬರುತ್ತದೆ.