ತರಗತಿಯೆಂದ ಮೇಲೆ ಅಲ್ಲಿ ನಾನಾ ರೀತಿಯ, ನಾನಾ ಸ್ವಭಾವದ ವಿದ್ಯಾರ್ಥಿಗಳು ಇರುವುದು ಸಹಜ. ಕೆಲವು ವಿದ್ಯಾರ್ಥಿನಿಯರು ತಮ್ಮ ಕೆಲವು ವಿಶಿಷ್ಟ ಚರ್ಯೆ, ನಡವಳಿಕೆಗಳಿಂದ ಅಧ್ಯಾಪಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ನನ್ನ ಮನಸ್ಸಿನಲ್ಲಿ ಹೀಗೆ ಉಳಿದುಕೊಂಡ ಒಬ್ಬ ವಿದ್ಯಾರ್ಥಿನಿಯೆಂದರೆ ಡಯಾನಾ. ಈಕೆಯು ಎರಡನೆ ಬಿ.ಎಸ್ಸಿಗೆ ನಾನು ಕನ್ನಡ ಪಾಠ ಮಾಡುತ್ತಿರುವಾಗ ನನಗೆ ಪರಿಚಿತಳಾದವಳು.
ಡಯಾನ ತರಗತಿಗೆ ನಿಯಮಿತವಾಗಿ ಬರುತ್ತಿದ್ದ ವಿದ್ಯಾರ್ಥಿನಿಯಲ್ಲ. ಆಗೊಮ್ಮೆ ಈಗೊಮ್ಮೆ ಬರುವುದು, ಅನೇಕ ದಿನಗಳು ಬರದೆಯೇ ಇರುವುದು – ಹೀಗೆಲ್ಲ ಮಾಡುತ್ತಿದ್ದಳು. ಒಂದು ದಿನ ಹಾಜರಾತಿ ಕರೆಯುವಾಗ ಅವಳನ್ನು ಎದ್ದು ನಿಲ್ಲಿಸಿ ನಾನು ಇದಕ್ಕೆ ಕಾರಣ ಕೇಳಿದೆ. `ಹುಷಾರಿರಲಿಲ್ಲ ಮ್ಯಾಮ್’ ಅಂದಳು. ನಂತರ ವಿಭಾಗಕ್ಕೆ ಕರೆಸಿ ಅವಳೊಂದಿಗೆ ಮಾತಾಡಿದೆ. ತನ್ನ ಆರೋಗ್ಯ ಸಮಸ್ಯೆಗಳಿಂದ ಮತ್ತೆ ಮತ್ತೆ ಆಸ್ಪತ್ರೆಗೆ ಹೋಗಬೇಕಾಗಿರುವುದರಿಂದ ಹೀಗಾಗುತ್ತದೆ ಅಂದಳು. ಅವಳ ನಿಷ್ಕಳಂಕ ಮುಖಭಾವ, ಮುಗ್ಧತೆಗಳು ನನ್ನ ಮನಸ್ಸನ್ನು ಮುಟ್ಟಿದವು. ಆರೋಗ್ಯ ನೋಡಿಕೊಳ್ಳಲು ಮತ್ತು ತರಗತಿಗಳಿಗೆ ಗೈರುಹಾಜರಾಗದಿರಲು ಸೂಚಿಸಿದೆ ಡಯಾನಾಗೆ.
ಡಯಾನ ತರಗತಿಗೆ ಅಷ್ಟು ನಿಯಮಿತವಾಗಿ ಬರುತ್ತಿರಲಿಲ್ಲವಾದರೂ ಬಂದಾಗ ತುಂಬ ಆಸಕ್ತಿಯಿಂದ ಪಾಠ ಕೇಳುತ್ತಿದ್ದಳು, ಮೈಯೆಲ್ಲ ಕಿವಿಯಾಗಿ ಅನ್ನುತ್ತಾರಲ್ಲ, ಹಾಗೆ. ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದಳು. ಕನ್ನಡ ಮಾತಾಡುವಾಗ ತುಸು ಎಡವುತ್ತಿದ್ದರೂ ಅವಳ ವಿಷಯಗ್ರಹಿಕೆ ಚೆನ್ನಾಗಿರುತ್ತಿತ್ತು. ನಾನು ವಿಭಾಗಕ್ಕೆ ಅವಳನ್ನು ಕರೆದು ವಿಚಾರಿಸಿದ ಮೇಲೆ ಅವಳ ಹಾಜರಾತಿ ತುಸು ಉತ್ತಮಗೊಂಡದ್ದನ್ನು ನಾನು ಗಮನಿಸಿದೆ.
ಒಮ್ಮೆ, ಡಯಾನಳು ಇದ್ದ ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದಾಗ ಮಕ್ಕಳಿಗೆ ಒಂದು ಕೆಲಸ ಕೊಟ್ಟೆ. ಹೆಣ್ಣುಮಕ್ಕಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸ್ವಂತವಾಗಿ ಆಲೋಚಿಸಿ, ತಮ್ಮ ಟಿಪ್ಪಣಿ ಪುಸ್ತಕದಲ್ಲಿ ಈ ಬಗ್ಗೆ ಐದು ಅಂಶಗಳನ್ನು ಬರೆದು, ತರಗತಿಯಲ್ಲಿ ವಿಷಯ ಮಂಡನೆ ಮಾಡುವಂತೆ ಹೇಳಿದೆ. ಮೂರು ನಾಲ್ಕು ವಿದ್ಯಾರ್ಥಿನಿಯರು ವಿಷಯ ಮಂಡನೆ ಮಾಢಿದರು. `ಇನ್ಯರ್ಯಾರು ಬರೆದಿದ್ದೀರ?’ ಎಂದು ಕೇಳಿದಾಗ ಡಯಾನ ಕೂಡ ಕೈಯೆತ್ತಿದಳು. ತರಗತಿಯಲ್ಲಿ ಆಚೀಚೆ ಓಡಾಡುತ್ತಿದ್ದ ನಾನು ಅವಳ ಹತ್ತಿರ ಹೋದಾಗ `ಪುಸ್ತಕ ಕೊಡಮ್ಮ, ನೋಡ್ತೀನಿ’ ಅಂದೆ. ಅವಳು ವಿಪರೀತ ಸಂಕೋಚ ಮಾಡಿಕೊಂಡು `ಬೇಡ ಮ್ಯಾಮ್. ಬೇಡ ಮ್ಯಾಮ್’ ಅಂದಳು. ಪುಸ್ತಕವನ್ನು ನನ್ನಿಂದ ಮರೆಮಾಡಲು ತುಂಬ ಪ್ರಯತ್ನಿಸುತ್ತಿದ್ದಳು. `ಯಾಕಮ್ಮ, ಕೊಡು ಪುಸ್ತಕ’ ಅಂದೆ ನಾನು. `ಅದೂ … ಅದೂ … ಮ್ಯಾಮ್ .. ನಾನು ಇಂಗ್ಲೀಷಲ್ಲಿ ಬರೆದಿದೀನಿ ಮ್ಯಾಮ್’ ಎಂದು ತುಂಬ ಹಿಂಜರಿಯುತ್ತಾ ಹೇಳಿದಳು. `ಪರವಾಗಿಲ್ಲ, ಕೊಡಮ್ಮ’ ಎಂದು ಅವಳು ಬರೆದಿದ್ದನ್ನು ಓದಿದೆ. ಅವಳು ಬರೆದ ಅಂಶಗಳು ಸರಿಯಾಗಿಯೇ ಇದ್ದವು. ನಾನು “ವಿಷಯ ಸರಿಯಾಗಿದೆಯಲ್ಲಮ್ಮ, ಇದನ್ನು ಕನ್ನಡದಲ್ಲಿ ಬರೆಯಬಹುದಿತ್ತಲ್ಲ?’’ ಎಂದು ಕೇಳಿದೆ. `ನಾನು ಸ್ಕೂಲಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದು ಮ್ಯಾಮ್. ಮನೇಲೂ ಕನ್ನಡ ಮಾತಾಡಲ್ಲ, ಅದರಿಂದಾಗಿ ಕನ್ನಡದಲ್ಲಿ ಓನಾಗಿ(ಇಂಗ್ಲೀಷಿನ oತಿಟಿ – ಸ್ವಂತವಾಗಿ) ಬರಿಯೋದು ಕಷ್ಟ. ಐ ಗೆಟ್ ಮೈ ಥಾಟ್ಸ್ ಇನ್ ಇಂಗ್ಲಿಷ್ ಮ್ಯಾಮ್’ ಅಂದಳು. ಅವಳ ಸನ್ನಿವೇಶ ನನಗೆ ಅರ್ಥವಾಯಿತು. ಹೆಚ್ಚು ಹೆಚ್ಚು ಕನ್ನಡ ಓದಿ, ಬರೆದು ಈ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಹೇಳಿದೆ.
ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಲ್ಲದ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಡಯಾನಾಳಂತಹ ಎಲ್ಲ ಮಕ್ಕಳೂ ಎದುರಿಸುವ ಸವಾಲು ಇದು ಅನ್ನಿಸುತ್ತದೆ. ಕನ್ನಡದಲ್ಲಿ ಯೋಚಿಸದಿದ್ದಾಗ ಕನ್ನಡದಲ್ಲಿ ಸ್ವಂತ ಬರವಣಿಗೆ ಮಾಡುವುದು ಕಷ್ಟ.
Like us!
Follow us!