ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನವೆಂಬರ್ ತಿಂಗಳು ಬಂತೆಂದರೆ ಒಂದು ಗಡಿಬಿಡಿ ಪ್ರಾರಂಭವಾಗುತ್ತದೆ. ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ, ಕನ್ನಡ ಅಧ್ಯಾಪಕರನ್ನು ಅತಿಥಿಗಳಾಗಿ ಆಹ್ವಾನಿಸಲು ಆಯೋಜಕರು, ಸಂಘಟಕರು ಬರುವ ತಿಂಗಳು ಅದು. ನಮ್ಮ ಕಾಲೇಜಿನ ಬೇರೆ ವಿಭಾಗದ ಸಹೋದ್ಯೋಗಿಗಳು ಈ ಓಡಾಟ, ಗಡಿಬಿಡಿಗಳನ್ನು ನೋಡಿ “ಓ, ನವೆಂಬರ್!! ನಿಮ್ಗೆಲ್ಲ (ಅರ್ಥಾತ್ ಕನ್ನಡ ಮೇಷ್ಟ್ರುಗಳಿಗೆಲ್ಲ) ತುಂಬ ಡಿಮ್ಯಾಂಡಲ್ವಾ? ಮ್ ಮ್ … ನಡೀಲಿ, ನಡೀಲಿ, ಚೆನ್ನಾಗಿ ಭಾಷಣ ಹೊಡ್ದು ಬನ್ನಿ ಎಂದು ತಮಾಷೆ ಮಾಡಿ ಕಾಲೆಳೆಯುವ ತಿಂಗಳೂ ಹೌದು ಅದು!
ಕೆಲವೊಮ್ಮೆ ಈ ಸಂದರ್ಭದಲ್ಲಿ ತಮಾಷೆಯ ಅನುಭವಗಳಾಗುತ್ತವೆ. ಒಂದೆರಡು ವರ್ಷಗಳ ಹಿಂದೆ ನಮ್ಮ ವಿಭಾಗಕ್ಕೆ ಬೆಂಗಳೂರಿನ ಒಂದು ಪ್ರತಿಷ್ಠಿತ ಕ್ರಿಶ್ಚಿಯನ್ ಕಾನ್ವೆಂಟಿನ ಕನ್ನಡ ಅಧ್ಯಾಪಕಿಯೊಬ್ಬರು ಬಂದಿದ್ದರು. `ನಾನು ಜೋಸೆಫಿನ್ ರಾಣಿ, ಕನ್ನಡ ಟೀಚರ್. ನಮ್ಮ ಏರಿಯಾದಲ್ಲಿ ನಮ್ಮ ಸ್ಕೂಲ್ ತುಂಬ ಪೇಮಸ್. ಈಗ ನಮ್ಮ ಕನ್ನಡ `ರಾಜ್ಯೋಸ್ತವಕ್ಕೆ ಒಂದು ಚೀಫ್ ಗೆಸ್ಟ್ ಬೇಕು, ಇಲ್ಲಿ ಸಿಗ್ತಾರಲ್ಲ?. ತುಂಬ ಉತ್ಸಾಹದಿಂದ ಹಾಗೂ ಒಂದು ರೀತಿಯ ಸ್ವಚ್ಛಂದ ಮುಗ್ಧತೆಯಿಂದ ಆಕೆ ಮಾತಾಡುತ್ತಿದ್ದರು. ಆಕೆಯ ಮಾತುಗಳ ವೈಖರಿ ನೋಡಿದಾಗ, ಅದನ್ನು `ತನ್ನ ಶಾಲೆ ತನಗೊಂದು ಕೆಲಸ ಕೊಟ್ಟಿದೆ, ಅದನ್ನು ಮಾಡಿ ಮುಗಿಸಿಬಿಡಬೇಕು ಎಂಬ ಕಾರ್ಯೋತ್ಸಾಹವೆನ್ನಬೇಕೋ, ಕನ್ನಡ ಭಾಷೆಯನ್ನು ಕುರಿತ ಅಜ್ಞಾನವೆನ್ನಬೇಕೋ ತಿಳಿಯದಾಯಿತು. `ಇಪ್ಪತ್ತೆಂಟು ವರ್ಷದಿಂದ ಕನ್ನಡಾನ ನಮ್ಮ ಸ್ಕೂಲಲ್ಲಿ ನಾನೇ ನೋಡ್ಕೋತಿರೋದು. `ರಾಜ್ಯೋಸ್ತವ ನಮ್ಮಲ್ಲಿ ತುಂಬ ಗ್ರ್ಯಾಂಡಾಗಿ ನಡಿಯುತ್ತೆ. ನಮ್ಮ ಫಾದರ್ ಅದ್ರಲ್ಲೆಲ್ಲ ತುಂಬ ಸ್ಟ್ರಿಕ್ಟ್ ಅಂದರು ಆಕೆ. ಆ ತಪ್ಪು ಉಚ್ಚಾರ ಕೇಳಿ ನಾನು ತಡೆಯಲಾಗದೆ `ಮೇಡಂ, ಅದು ರಾಜ್ಯೋತ್ಸವ, ರಾಜ್ಯೋಸ್ತವ ಅಲ್ಲ ಅಲ್ವಾ? ಅಂದೆ. “ಓಹ್ ಹೌದು, ಹೌದು ….. ಒಂದೊಂದ್ಸಲ ಟೆನ್ಶನ್ನಲ್ಲಿ ಹೀಗಾಗುತ್ತೆ ಅಂದರು. `ಭಗವಂತಾ, ಈಕೆಯಿಂದ ಪಾಠ ಕೇಳುವ ಶಾಲಾ ಮಕ್ಕಳ ಕನ್ನಡ ಉಚ್ಚಾರದ ಗತಿ ಏನಪ್ಪಾ? ಎಂಬ `ಟೆನ್ಶನ್ ಅಂದು ನಮಗಾಯಿತು!!