ಕನ್ನಡ ಭಾಷೆಯು ಬೆಳೆಯಬೇಕೆಂದರೆ ಅದರಲ್ಲಿ ಹೊಸ ಹೊಸ ಸಂಶೋಧನಾ ಆಯಾಮಗಳು ಮತ್ತು ಸಮಕಾಲೀನ ವಿಷಯಗಳು ಚರ್ಚೆಯಾಗಬೇಕು, ಹಾಗೂ ಹೊಸ ಆವಿಷ್ಕಾರಗಳಿಗೆ ತಕ್ಕ ಹೊಸ ಕನ್ನಡ ಪದಗಳು ಸೃಷ್ಟಿಯಾಗಬೇಕು ಎಂಬುದು, ಎಲ್ಲ ಕನ್ನಡ ಪ್ರಿಯರೂ ಒಪ್ಪುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನದ ವಿಷಯ ಬಂದಾಗ, ಜನಮಾನಸದಲ್ಲಿನ ಎರಡು ಅನಿಸಿಕೆಗಳು ಗಮನೀಯವಾಗಿದೆ. `ಗಂಭೀರ ವಿಜ್ಞಾನವನ್ನು ಕನ್ನಡಕ್ಕೆ ತರುವುದು ಅಸಾಧ್ಯವೆನ್ನುವಷ್ಟು ಕಷ್ಟಕರವಾದದ್ದು ಎಂಬುದು ಇವುಗಳಲ್ಲಿ ಒಂದಾದರೆ, `ಈಗಾಗಲೇ ವಿಜ್ಞಾನವನ್ನು ಸೂಚಿಸಲು ಬಳಸುತ್ತಿರುವ ಕನ್ನಡ ಪದಗಳು ಸಂಸ್ಕೃತಮಯವಾಗಿದ್ದು ಬರೆಯಲು, ಉಚ್ಚರಿಸಲು ತುಂಬ ಕಷ್ಟ ಕೊಡುತ್ತವೆ, ಇದರಿಂದಾಗಿ ಕನ್ನಡ ವಿಜ್ಞಾನವು ಇಂಗ್ಲಿಷ್ ವಿಜ್ಞಾನಕ್ಕಿಂತ ಕಷ್ಟಕರವಾಗುತ್ತದೆ’ ಎಂಬುದು ಇನ್ನೊಂದು. ಆದರೆ ತುಸು ಆಳವಾಗಿ ವಿಚಾರ ಮಾಡಿದಾಗ ಇದು ಹೀಗಿಲ್ಲ, ಹೀಗಿರಬೇಕಿಲ್ಲ ಅನ್ನಿಸುತ್ತದೆ.
೧. ಶ್ರೀಯುತರಾದ ಆರ್.ಎಲ್.ನರಸಿಂಹಯ್ಯ, ಟಿ.ಆರ್.ಅನಂತರಾಮು, ಪವನಜ ಮಂತಾದ ದಿಗ್ಗಜ ವಿಜ್ಞಾನ ಬರಹಗಾರರು ಈಗಾಗಲೇ, ಅದೆಷ್ಟು ಸರಳವಾಗಿ ಕನ್ನಡವನ್ನು ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. “ವಸ್ತು ಎಂದರೆ ಹೆಪ್ಪುಗಟ್ಟಿದ ಶಕ್ತಿ, ಮತ್ತು ಶಕ್ತಿ ಎಂದರೆ ಅಲೆಯಾಗಿ ಹರಿಯುತ್ತಿರುವ ವಸ್ತು’’ ಎಂದು ನರಸಿಂಹಯ್ಯನವರು ಬರೆದಾಗ ಐನ್ಸ್ಟೈನ್ ರ ಸಾಪೇಕ್ಷತಾ ಸಿದ್ಧಾಂತ(`ಥಿಯರಿ ಆಫ್ ರಿಲೇಟಿವಿಟಿ’)ವನ್ನು ಅತ್ಯಂತ ಸರಳವಾಗಿ ವಿವರಿಸಿದಂತೆ ಆಗಲಿಲ್ಲವೇ? ಮನಸ್ಸಿದ್ದೃರೆ ಮಾರ್ಗವಿದೆ.
೨. ಇನ್ನು ಇತ್ತೀಚೆಗೆ ಶ್ರೀ ಪ್ರಶಾಂತ್ ಸೊರಟೂರು ಅವರು ಕೂಡು, ಕಳೆ, ಹರಿ, ಎಳೆ, ಬಾಗು, ಕುದಿ, ಕರಗು ಮುಂತಾದ ನಿತ್ಯಬಳಕೆಯ ಕ್ರಿಯಾಪದಗಳನ್ನು ಮತ್ತು ಉಬ್ಬು, ತಗ್ಗು, ಬೆಳಕು, ಅಡುಗೆ, ಮುಂತಾದ ದಿನನಿತ್ಯ ಬಳಕೆಯ ಸರಳ ನಾಮಪದಗಳನ್ನು ಬಳಸಿಕೊಂಡೇ ಎಷ್ಟು ಸುಲಭವಾಗಿ ವಿಜ್ಞಾನ ವಿಷಯದಲ್ಲಿ ಬರವಣಿಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ವಿಜ್ಞಾನ ವಿಷಯ ಹಾಗೂ ಕನ್ನಡ ಭಾಷೆ ಎರಡನ್ನೂ ಪ್ರೀತಿಸುವ ಲೇಖಕ-ಲೇಖಕಿಯರಿಂದ ಇಂತಹ ಬರವಣಿಗೆಯನ್ನು ಬರೆಯಲು ಸಾಧ್ಯವಿದೆ. ಈ ಬಗೆಯ ಆಸಕ್ತರಿಂದ ಕನ್ನಡ ವಿಜ್ಞಾನ ಬರವಣಿಗೆಯ ಬಗ್ಗೆ ಇರುವ ಭಯ, ಅನುಮಾನ ಹೊರಟುಹೋಗಿ, ಅದು `ಸುಲಿದ ಬಾಳೆಯ ಹಣ್ಣಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ’ ಸರಳವೂ, ಸುಲಭವೂ ಆಗುತ್ತದೆ ಎಂದು ನಾವು ಆಶಿಸಬಹುದಲ್ಲವೇ?