ಒಂದು ಭಾಷೆ ಚೆನ್ನಾಗಿ ಬರಬೇಕೆಂದರೆ ನಾವು ಅದರ ಪದಗಳನ್ನು, ನುಡಿಗಟ್ಟು, ಸೂಕ್ತಿ, ಗಾದೆಮಾತುಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಾ ಹೋಗಬೇಕು. ಆಗ ಕಾಲಕ್ರಮೇಣ ಆ ಭಾಷೆಗೆ ಸಂಬಂಧಿಸಿದಂತೆ ನಮ್ಮ ಪದಸಂಪತ್ತು ಹೆಚ್ಚುತ್ತಾ ಹೋಗಬೇಕು. ಕಲಿಯುವುದೇ ಜೀವನದ ಮುಖ್ಯ ಉದ್ದೇಶವಾಗಿರುವ ವಿದ್ಯಾರ್ಥಿಗಳ ಮಟ್ಟಿಗೆ ಈ ಮಾತು ಹೆಚ್ಚು ನಿಜ.

ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಈ ವಿಷಯದಲ್ಲಿ ನನ್ನ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಿದಾಗ ಒಂದು ವಿಷಯ ಹೊಳೆಯಿತು. ದಿನಾ ತರಗತಿಯಲ್ಲಿ ಒಂದು ಹೊಸ ಪದ, ಒಂದು ಸೂಕ್ತಿ ಅಥವಾ ಗಾದೆ ಮಾತು ಬರೆಸಿದರೆ ಹೇಗೆ ಎಂದು. ಇದರಿಂದ ಅವರ `ಪದಸಂಪತ್ತೂ ಹೆಚ್ಚುತ್ತೆ ಹಾಗೂ ಜೀವನ ಮೌಲ್ಯಗಳನ್ನು ಕುರಿತ ತಿಳುವಳಿಕೆಯೂ ಹೆಚ್ಚುತ್ತೆ’ ಅನ್ನಿಸಿತು. ಸರಿ, ಹೀಗೆ ಮಾಡಲು ಶುರು ಮಾಡಿದೆ. ತರಗತಿ ಪ್ರಾರಂಭವಾದ ಮೂರರಿಂದ ಐದು ನಿಮಿಷದ ಒಳಗೆ ಈ ಚಟುವಟಿಕೆ ಮುಗಿಯುತ್ತೆ ಮತ್ತು ದೈನಂದಿನ ಪಾಠಕ್ಕೆ ಇದರಿಂದ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಕೆಲವು ತರಗತಿಗಳಲ್ಲಿ ಉತ್ಸಾಹಿ ವಿದ್ಯಾರ್ಥಿಗಳೇ ನಾನು ತರಗತಿಗೆ ಹೋಗುವಷ್ಟರಲ್ಲಿ ಹೊಸ ಪದ, ಸೂಕ್ತಿಗಳನ್ನು ಬರೆದಿರುವುದುಂಟು.

ತರಗತಿಯಲ್ಲಿ ಮಕ್ಕಳಿಗೆ ಹೇಳುತ್ತೇನೆ “ಮಕ್ಕಳೇ, ನೀವು ದಿನಕ್ಕೆ ಒಂದು ಹೊಸ ಪದ ಕಲಿತರೆ ನಿಮ್ಮ ಮೂರು ವರ್ಷಗಳ ನಂತರ ಪದವಿ ಮುಗಿಯುತ್ತಿದ್ದಂತೆ ಒಟ್ಟು ಸಾವಿರ ಪದಗಳನ್ನು ಕಲಿತರ‍್ತೀರಿ!’’. ಹೀಗೆ ಕಲಿತವರಿಗೆ ಪುಸ್ತಕ ಬಹುಮಾನ ಕೊಡುತ್ತೇನೆ ಎಂದು ಸಹ ಹೇಳಿರುತ್ತೇನೆ. ಇದನ್ನು ಎಷ್ಟು ವಿದ್ಯಾರ್ಥಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ಕಾಣೆ. ಆದರೆ ಅಪರೂಪಕ್ಕೆ ಯಾರಾದರೂ ವಿದ್ಯಾರ್ಥಿಗಳು ತಾವು ದಿನಾಲೂ ಬರೆದು ಕಲಿತ ಪದಗಳನ್ನು ನಮ್ಮ ವಿಭಾಗಕ್ಕೆ ತಂದು ತೋರಿಸಿದಾಗ ತುಂಬ ಸಂತೋಷ ಪಟ್ಟಿದ್ದೇನೆ. 

ಹೊಸಗನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರು ಎಂದೇ ಹೆಸರಾದ ಕವಿ ಶ್ರೀ ಗೋಪಾಲ ಕೃಷ್ಣ ಅಡಿಗರು ನಿಘಂಟಿನಿಂದ ದಿನಾ ಒಂದು ಹೊಸ ಪದವನ್ನು ಕಲಿಯುತ್ತಿದ್ದರಂತೆ! ಅವರ ಕಾವ್ಯ ಹೇಗೆ ಅಷ್ಟು ಪದಶ್ರೀಮಂತವಾಗಿದೆ ಎಂಬುದಕ್ಕೆ ಇದೂ ಕೂಡ ಒಂದು ಕಾರಣವಿರಬಹುದು.

ವಿವೇಕಿಗಳಾದ ಯಾರೋ ಮಹಾನುಭಾವರೊಬ್ಬರು ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಕೃಷಿಗೆ ಹೋಲಿಸಿದ್ದಾರೆ ಎಂದು ನೆನಪು. ರೈತ ಹೊಲದಲ್ಲಿ ನೂರು ಬೀಜ ಹಾಕಿದರೆ ನೂರಕ್ಕೆ ನೂರು ಬೀಜಗಳೂ ಸಸಿಗಳಾಗುವುದಿಲ್ಲ, ಎಲ್ಲೋ ಕೆಲವು ಮಾತ್ರ ಮೊಳಕೆಯೊಡೆದು ಸಸಿಗಳಾಗಿ ರೈತನ ಶ್ರಮವನ್ನು ಸಾರ್ಥಕಗೊಳಿಸುತ್ತವೆ. ಹೀಗೆಯೇ ಎಲ್ಲೋ ಕೆಲವು ವಿದ್ಯಾರ್ಥಿಗಳು ಮಾತ್ರ ಅಧ್ಯಾಪಕರು ಕೊಟ್ಟ ಜ್ಞಾನಬುತ್ತಿಯನ್ನು ಬಿಚ್ಚಿ ಹೊಸ ಬೆಳಕಿನ ಉಜ್ವಲ ದಾರಿಯಲ್ಲಿ ಚಲಿಸಿ ಈ ಲೋಕಕ್ಕೆ ಬೆಳಕು ನೀಡುವಂಥವರಾಗುತ್ತಾರೆ. ಅಂತಹ ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರ ಮನಸ್ಸು ಕಾಯುತ್ತಾ ಇರುತ್ತದೆ. ಇದೇ ಭರವಸೆಯಲ್ಲಿ ಅಧ್ಯಾಪಕರು ತಮ್ಮ ವಿದ್ಯಾಕೃಷಿಯನ್ನು ನಿರಂತರವಾಗಿ ಮುಂದುವರಿಸುತ್ತಾರೆ.