ಯುಗಾದಿ ಹಬ್ಬದ ಮಾರನೆಯ ದಿನ ಎಲ್ಲ ಕಡೆ ರಜೆಯ ಮನಸ್ಥಿತಿ ಇರುವುದನ್ನು ನಾವು ಗಮನಿಸಿದ್ದೇವೆ ಅಲ್ಲವೇ? “ಇವತ್ತು ವರ್ಷ್‌ತೊಡ್ಕಲ್ವಾ, ಖಾರದೂಟ ಇರುತ್ತೆ. ನಿಮ್ಮನೇಲಿ ಏನು ವಿಶೇಷ? ॒॒ ॒“ಇಲ್ಲಪ್ಪಾ ನಾವು ಖಾರದೂಟದವರಲ್ಲ, ಹೊಸ್ತೊಡಕಿಗೆ ನಮ್ಮನೇಲಿ ಇವತ್ತು ಪಾಯ್ಸ ಮಾಡ್ತಾರೆ ಇಂತಹ ಮಾತುಗಳು ಕಿವಿ ಮೇಲೆ ಅಂದು ಬೀಳುತ್ತವೆ. ಪದಗಳ ಕುರಿತು ಜಿಜ್ಞಾಸೆ ಮಾಡುವುದು ನನ್ನ ವೃತ್ತಿ, ಪ್ರವೃತ್ತಿ ಎರಡೂ ಆದ್ದರಿಂದ ಈ `ವರ್ಷ್‌ತೊಡ್ಕು, ಹೊಸ್ತೊಡ್ಕು ಪದಗಳು ನನ್ನನ್ನು ಕಾಡಲಾರಂಭಿಸಿದವು. ಏನು ಹಾಗಂದರೆ? ಅದು `ವರ್ಷದ ತೊಡಗು, (ಅಂದರೆ ಹೊಸ ವರ್ಷಕ್ಕೆ ತೊಡಗುವುದು ಎಂಬ ಅರ್ಥದಲ್ಲಿ) ಇರಬಹುದೇ ಎಂದು ಯೋಚಿಸಿದೆ, ಅಡಿಗರು ತಮ್ಮ `ಬತ್ತಲಾರದ ಗಂಗೆ ಎಂಬ ಕವಿತೆಯಲ್ಲಿ `ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು ಎಂಬ ಪದಪ್ರಯೋಗ ಮಾಡಿದ್ದಾರೆ. ಈ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಕನ್ನಡದ ವಿಷಯಲ್ಲಿ ಅನುಮಾನ ಬಂದಾಗಲೆಲ್ಲ ನಾನು ಯಾವಾಗಲೂ ಮಾಡುವ ಹಾಗೆ ಕನ್ನಡ ವಿದ್ವಾಂಸರೂ, ನಿವೃತ್ತ ಪ್ರಾಧ್ಯಾಪಕರೂ, ಆತ್ಮೀಯರೂ ಆದ ಪ್ರೊ.ಕೆ.ಎಸ್.ಮಧುಸೂದನ ಅವರನ್ನು ಕೇಳಿದೆ. ಅವರು ಈ ಬಗ್ಗೆ ಕೊಟ್ಟ ವಿವರಣೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

ಹಳ್ಳಿಗಳಲ್ಲಿ ಸಾಗುವಳಿಯ ಚಟುವಟಿಕೆಗಳು ಹೊಸದಾಗಿ ಪ್ರಾರಂಭವಾಗುವುದು ಯುಗಾದಿ ಹಬ್ಬದ ಮಾರನೆಯ ದಿನದಿಂದ. ಅದಕ್ಕಾಗಿ ವರ್ಷದ ತೊಡಕು ಎಂಬ ಪದ ಬಳಕೆಗೆ ಬಂದಿದೆ. ಇಲ್ಲಿ ತೊಡಕು ಪದದ ಬದಲಿಗೆ ತೊಡಗು ಎಂದೂ ಸಹ ಬಳಸುತ್ತಾರೆ, ಏಕೆಂದರೆ, ಕನ್ನಡದಲ್ಲಿ ಕ-ಗ ಕೆಲವೊಮ್ಮೆ ಒಂದು ಇನ್ನೊಂದರ ಜಾಗದಲ್ಲಿ ಬರುತ್ತವೆ(ಕತಪ-ಗದಬ ವ್ಯಾಕರಣ ನಿಯಮ).

ತೊಡಕು ಪದದ ಮೂಲ ಧಾತು ತೊಡು. ನಿಘಂಟಿನಲ್ಲಿ `ತೊಡು ಎಂಬ ಪದಕ್ಕೆ ಇರುವ ಅನೇಕ ಅರ್ಥಗಳ ಜೊತೆಗೆ `ಮೊದಲು ಮಾಡು, `ಆರಂಭಿಸು ಎಂಬ ಅರ್ಥವೂ ಇದೆ. ಯುಗಾದಿ ಹಬ್ಬದ ಮಾರನೆಯ ದಿನ ಎರಡು ಮರದ ನೇಗಿಲುಗಳನ್ನು ಮಾಡಿ ನೆಲದಲ್ಲಿ ಹೂಳಿ, ಅವು ಮನುಷ್ಯನಂತೆ ಕಾಣುವ ಹಾಗೆ ವಿನ್ಯಾಸ ಮಾಡಿ, ಅದರ ಬುಡದಲ್ಲಿ ತಮ್ಮ ಹೊಲದ ಮಣ್ಣನ್ನು ಹಾಕಿ, ಅದರಲ್ಲಿ ನವಧಾನ್ಯಗಳ ಬೀಜಗಳನ್ನು ಊರಿ ಗಂಡ-ಹೆಂಡತಿ ಪೂಜೆ ಮಾಡುತ್ತಾರೆ. ಯುಗಾದಿ ಹಬ್ಬದ ಒಂಬತ್ತು ದಿನಗಳ ನಂತರ ಬರುವ ಶ್ರೀರಾಮ ನವಮಿಯನ್ನು ಹಳ್ಳಿಗಳಲ್ಲಿ ರಾಮ ನವರಾತ್ರಿ ಎಂದು ಕರೆಯುತ್ತಾರೆ. ಅಷ್ಟು ಹೊತ್ತಿಗೆ ಆ ನವಧಾನ್ಯದ ಬೀಜಗಳು ಮೊಳಕೆಯೊಡೆದಿರುತ್ತವೆ. ಇದು ಸಮೃದ್ಧಿಯ ಸಂಕೇತ. ಈ ಎರಡು ನೇಗಿಲ ರಚನೆಯನ್ನು `ಮರುಗ ಎಂದು ಕರೆಯುತ್ತಾರೆ. ಮರುಗ ಅಂದರೆ ಅಳಿಯ ಎಂದು ಅರ್ಥ, ಅಂದರೆ ಕುಟುಂಬದಲ್ಲಿ ಮುಂದೆ ಸಂತಾನ ಬರುವ ಸೂಚನೆ ಇದು. ವರ್ಷದ ತೊಡಕಿನ ದಿನ ಸಸ್ಯಾಹಾರಿಗಳು ಪಾಯಸ ಮಾಡಿದರೆ ಮಾಂಸಾಹಾರಿಗಳು ಮಾಂಸದ ಅಡಿಗೆ ಮಾಡಿಕೊಂಡು ಬಂಧು-ಬಾಂಧವರ ಜೊತೆ ಉಣ್ಣುತ್ತಾರೆ. ವರ್ಷದ ತೊಡಕಿನ ದಿನ ತಿಂದದ್ದು ಇಡೀ ವರ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಯುಗಾದಿ ಸಂಬಂಧಿತ ವರ್ಷದ ತೊಡಕು ನಮ್ಮ ಹಳ್ಳಿಗಳಲ್ಲಿ ಸಂತಾನ ಮತ್ತು ಸಮೃದ್ಧಿ ಎರಡೂ ವಿಷಯಗಳಿಗೆ ಸಂಕೇತವಾಗಿದೆ. ಹೊಸ ವರ್ಷದ ಆರಂಬದ(ಬೇಸಾಯದ) ಚಟುವಟಿಕೆಗಳನ್ನು ಸಂಕೇತಿಸುವ ವರ್ಷದ ತೊಡಕು ಪದವು ಜನರು ಬಳಸಿ, ಬಳಸಿ ವರ್ಷ್‌ತೊಡ್ಕು, ಹೊಸ್ತೊಡ್ಕು, ವೊಸ್ತೊಡ್ಕು ಎಂಬೆಲ್ಲ ರೂಪಗಳನ್ನು ಪಡೆದಿದೆ!

ಮಧುಸೂದನ್ ಮೇಷ್ಟ್ರು ಹೇಳಿದ್ದು ಕೇಳಿದಾಗ `ಅಬ್ಬ, ಒಂದು ಪದದ ಹಿಂದೆ ಎಷ್ಟೆಲ್ಲ ಅರ್ಥ ಇರುತ್ತದೆ ಮತ್ತು ಬಳಕೆಯಲ್ಲಿ ಆ ಪದ ಏನೆಲ್ಲ ರೂಪಾಂತರಗಳನ್ನು ಪಡೆಯುತ್ತಲ್ಲ ಅನ್ನಿಸ್ತು. ಓದಿದಾಗ ನಿಮಗೂ ಹೀಗೆ ಅನ್ನಿಸ್ತಾ?