ಚಟುವಟಿಕೆಯಿಂದ ಪುಟಿಯುವ ಹದಿಹರೆಯದವರನ್ನು ಕಾಲೇಜಿನ ತರಗತಿ ಕೋಣೆಗಳಲ್ಲಿ ಒಂದೇ ಕಡೆ ಕೂರುವಂತೆ ಮಾಡಿ ಅವರಿಗೆ ಆಸಕ್ತಿ ಮೂಡದ ವಿಷಯಗಳನ್ನು ಯಾಂತ್ರಿಕವಾಗಿ ತಲುಪಿಸುವುದು ಅಷ್ಟೇನೂ ಸಂತೋಷದ ವಿಷಯವಲ್ಲ. ವಿಷಯ ಹೀಗಿರುವಾಗ, `ಕನ್ನಡ ತರಗತಿಗಳನ್ನು ಆಸಕ್ತಿದಾಯಕವಾಗಿಸುವುದು ಹೇಗೆ’ ಎಂದು ಯಾವಾಗಲೂ ಯೋಚಿಸುವ ನನ್ನಂತಹ ಅಧ್ಯಾಪಕರಿಗೆ ಸಹಾಯ ಮಾಡುವ ಒಂದು ಪರಿಕಲ್ಪನೆ ಅಂದರೆ ಸಕ್ರಿಯ ತರಗತಿಯದ್ದು.

ಸಕ್ರಿಯ ತರಗತಿ ಎಂದರೆ ಏನು? ಮಕ್ಕಳು ನಗುವ, ತಮ್ಮ ಭಾವನೆಗಳನ್ನು, ಪಾಠವು ಕೊಟ್ಟ ಹಾಗೂ ಜೀವನವು ಕೊಟ್ಟ ಅನುಭವಗಳನ್ನು ಮತ್ತು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಹಾಗೂ ತರಗತಿ ಕೋಣೆಯಲ್ಲಿ ಚಲಿಸುವ ಅವಕಾಶ ಇರುವ ತರಗತಿ. ತರಗತಿ ಪಾಠವನ್ನು ಜೀವನಕ್ಕೆ ಮತ್ತು ಜೀವನವನ್ನು ತರಗತಿ ಪಾಠಕ್ಕೆ ಅನ್ವಯಿಸಲು ಸಾಧ್ಯವಾಗುವ ತರಗತಿ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಬ್ಬರೂ ಸಂತೋಷದಿಂದ ಎದುರು ನೋಡುವಂತಹ ತರಗತಿ. ಗಟ್ಟಿಯಾಗಿ ವಾಚನ ಮಾಡಲು, ಸ್ವಂತ ಪ್ರತಿಭೆಯಿಂದ ಸಾಹಿತ್ಯ ಬರೆಯಲು, ಚಿತ್ರ ರಚಿಸಲು. ಸಂದರ್ಭ ಬಂದರೆ ಹಾಡಲು, ಕುಣಿಯಲು, ನಟಿಸಲು! ಸಾಧ್ಯವುಳ್ಳ ತರಗತಿ.  

ನನ್ನ ಅನುಭವದಲ್ಲಿ ಸಕ್ರಿಯ ತರಗತಿಗಳನ್ನು ರೂಪಿಸುವುದು ತುಂಬ ಸುಲಭವೇನೂ ಅಲ್ಲ, ಹಾಗೆಂದು ತೀರಾ ಕಷ್ಟಕರವೂ ಅಲ್ಲ. ಬೇರೆ ಬೇರೆ ಸ್ಥಳಗಳು ಮತ್ತು ಹಿನ್ನೆಲೆಗಳಿಂದ ಬಂದ, ವಿವಿಧ ಕಲಿಕಾ ಸಾಮರ್ಥ್ಯಗಳಿರುವ, ತರಗತಿಯ ಮುಂದೆ ನಿಂತು ಮಾತಾಡಲು ಸಭಾಕಂಪನದಿಂದಾಗಿ ತುಂಬ ಹೆದರುವ, ಅತಿ ಸಂಕೋಚ ಸ್ವಭಾವವುಳ್ಳ, ಚಂಚಲ ಮನಸ್ಸುಳ್ಳ ಒಟ್ಟಿನಲ್ಲಿ ಭಿನ್ನಮಿಶ್ರಣವಾದ ಅವರನ್ನು ಒಂದು ವಿಶಿಷ್ಟ ಮನಸ್ಥಿತಿಗೆ ತರಬೇಕಾಗುತ್ತದಲ್ಲ, ಅದು ಒಂದು ಸವಾಲು. ಆದರೆ ಭವಿಷ್ಯದಲ್ಲಿ ತುಂಬ ಫಲಪ್ರದವಾಗುವ ಸಾಧ್ಯತೆಯುಳ್ಳದ್ದಾದರಿಂದ ಈ ಸವಾಲನ್ನು ಅಧ್ಯಾಪಕರು ಸ್ವೀಕರಿಸಬಹುದೆಂದು ನನಗನ್ನಿಸುತ್ತೆ.

ಹೀಗೆ ಸಕ್ರಿಯ ತರಗತಿಗಳನ್ನು ರೂಪಿಸುವ ಪ್ರಯತ್ನದಲ್ಲಿದ್ದಾಗ ಇದ್ದಕ್ಕಿದ್ದಂತೆ ಉಜ್ವಲ ಪ್ರತಿಭೆಯ ಒಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿಯ ಅವಿರ್ಭಾವ ಆಗುವುದು ಮತ್ತು ನಿಧಾನಕ್ಕೆ ಮಕ್ಕಳು ಸಂಕೋಚ ಕಳೆದುಕೊಂಡು ಉಲ್ಲಾಸದಿಂದ ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನೋಡುವುದು ಅಧ್ಯಾಪಕ ಹೃದಯಕ್ಕೆ ತುಂಬ ಹಿಗ್ಗು ತರುವ ಸಂಗತಿ.