ಕ್ರಿಮಿನಾಶಕ ಪಾತ್ರೆ – ಹೆಚ್ಚಿನ ಉಷ್ಣತೆ ಮತ್ತು ಒತ್ತಡದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಗಟ್ಟಿಯಾದ ಪಾತ್ರೆ.
ವಿದ್ಯುದಣು ಸುಗ್ಗಿ – ಕೇವಲ ಒಂದೇ ಬಾರಿಯ ವಿದ್ಯುದಣುಗೊಳಿಸುವಿಕೆಯಿಂದ ವಿಪುಲ ಸಂಖ್ಯೆಯ ವಿದ್ಯುದಣುಗಳು ಸೃಷ್ಟಿಯಾಗುವ ಪ್ರಕ್ರಿಯೆ.
ಅಕ್ಷರೇಖೆ – ಒಂದು ವಸ್ತು ಅಥವಾ ವ್ಯವಸ್ಥೆಯು ಯಾವ ರೇಖೆಯ ಸುತ್ತ ಸುತ್ತುತ್ತದೋ ಆ ರೇಖೆ.
ಅಸಮದೃಷ್ಟಿ – ಸರ್ವೇಸಾಮಾನ್ಯವಾದ ಒಂದು ದೃಷ್ಟಿದೋಷ ಇದು. ಒಂದೇ ದೂರದಲ್ಲಿರುವ ಉದ್ದುದ್ದಕ್ಕಿರುವ ಹಾಗೂ ಅಡ್ಡಡ್ಡಕ್ಕಿರುವ ವಸ್ತುಗಳನ್ನು ಒಟ್ಟಿಗೇ ನೋಡಿದಾಗ ಅವನ್ನು ಬೇರೆ ಬೇರೆಯಾಗಿ ಗ್ರಹಿಸಲು ಸಾಧ್ಯವಾಗದ ದೃಷ್ಟಿದೋಷ.
ಖಗೋಳ ವಿಜ್ಞಾನ – ಭೂಮಿಯ ವಾತಾವರಣದ ಆಚೆಗೆ ಇರುವ ವಿಶ್ವದ ಅಧ್ಯಯನ.
ವಕ್ರಾಕರ್ಷಿತ ಸರಳರೇಖೆ – ಅನಂತದೆಡೆಗೆ ಸಾಗುತ್ತಿರುವ ವಕ್ರರೇಖೆಯೊಂದನ್ನು ಮುಟ್ಟಲು ಯತ್ನಿಸುತ್ತಿರುವ ಸರಳರೇಖೆ.
ಪರಮಾಣು ಗಡಿಯಾರ – ಪರಮಾಣು ಅಥವಾ ಅಣುಗಳಲ್ಲಿ ಕಾಣುವ ನಿಯತಕಾಲಿಕ ಗುಣಸ್ವಭಾವಗಳ ಆಧಾರದ ಮೇಲೆ ಕಾಲವನ್ನು ಅಳೆಯಲು ಅಥವಾ ಪ್ರಮಾಣೀಕರಿಸಲು ಬಳಸುವ ಉಪಕರಣ.