ತಂಪುಕಾರಕ – ಉಷ್ಣ ವರ್ಗಾವಣೆಯ ವಿಧಾನದಿಂದ ಬಿಸಿ ಚಾಲಕ ಯಂತ್ರದಿಂದ ಶಕ್ತಿಯನ್ನು ತೆಗೆದುಬಿಡುವ ದ್ರವ.
ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ. ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು ಮಸೂರವು ಮಧ್ಯದಲ್ಲಿ ಉಬ್ಬಿರುತ್ತದೆ.
ಸ್ವತಃಚಲನಾ ಉಷ್ಣ ವರ್ಗಾವಣೆ – ಒಂದು ದ್ರವದಲ್ಲಿ ಆ ದ್ರವದ ಚಲನೆಯಿಂದಲೇ ಉಷ್ಣತೆಯು ಅದರ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆಯಾಗುವುದು.
ಅಖಂಡ ವರ್ಣಪಟಲ – ಹೊರಸೂಸಲ್ಪಟ್ಟ ಅಥವಾ ಹೀರಲ್ಪಟ್ಟ ವಿಕಿರಣದ ಅಖಂಡ ಶ್ರೇಣಿಯಿಂದ ಉಂಟಾಗಿರುವ ವರ್ಣಪಟಲ.
ನಿಯಂತ್ರಕ ಸರಳು – ಉಷ್ಣ ವಿದ್ಯುದಣು ಕವಾಟ ಅಥವಾ ಋಣಕಿರಣ ಕೊಳವೆಯಲ್ಲಿ ಇರಿಸಿದ ಲೋಹಪರದೆಯ ರೂಪದ ವಿದ್ಯುತ್ ಧ್ರುವ. ಇದು ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಹರಿಯುವ ಎಲೆಕ್ಟ್ರಾನುಗಳನ್ನು ನಿಯಂತ್ರಿಸುತ್ತೆ.
ನಿರಂತರ ಅಲೆ – ಆಕಾಶವಾಣಿಯ ಸಂವಹನದಲ್ಲಿ ಆಗುವಂತೆ ಒಂದು ಕಾಲಾವಧಿಯಲ್ಲಿ ನಿರಂತರವಾಗಿ ಪ್ರಸಾರಿಸಿದ ಒಂದು ವಿದ್ಯುತ್ಕಾಂತೀಯ ಅಲೆ.
ಸಂಪರ್ಕ ಅಂತಃ ಸಾಮರ್ಥ್ಯ-ಸಂಪರ್ಕದಲ್ಲಿರುವ ಎರಡು ಘನವಸ್ತುಗಳ ನಡುವೆ ಉಂಟಾಗುವ ಅಂತಃಸಾಮರ್ಥ್ಯ ವ್ಯತ್ಯಾಸ.
ಕಾನ್ಸ್ಟೆಂಟನ್ – ತಾಮ್ರ ಮತ್ತು ತವರಗಳ ಒಂದು ಮಿಶ್ರಲೋಹ. ಉಷ್ಣತೆಯು ಬದಲಾದಾಗ ಈ ಲೋಹದ ವಿದ್ಯುತ್ ನಿರೋಧಕತೆಯಲ್ಲಿ ತುಂಬ ಕಡಿಮೆ ವ್ಯತ್ಯಾಸ ಆಗುವುದರಿಂದ, ಇದನ್ನು ವಿದ್ಯುದುಷ್ಣತೆಯನ್ನು ಅಳೆಯುವ ಉಪಕರಣಗಳಲ್ಲಿ ಮತ್ತು ನಿಖರತಾ ರೆಸಿಸ್ಟರುಗಳಲ್ಲಿ ಬಳಸುತ್ತಾರೆ.
ಸ್ಥಿರಾಂಕ – ಬೇರೆ ಭೌತಿಕ ಸಂಗತಿಗಳು ಬದಲಾದರೂ ತಾನು ಬದಲಾಗದೆ ಉಳಿಯುವ ಒಂದು ಪರಿಮಾಣ ಅಥವಾ ಅಂಶ.