ಒಂದು ಸಲದ ಅಳತೆ( ಒಕ್ಕುಡಿತೆ) – ವಿಕಿರಣಕಾರೀ ಬೆಳಕಿನಿಂದ ಒಂದು ಜೀವಿಗೆ ಒಂದು ಸಲಕ್ಕೆ ಕೊಡಲ್ಪಟ್ಟ ಹಾಗೂ ಆ ಜೀವಿಯು ಹೀರಿಕೊಂಡ ಶಕ್ತಿ.
ಡಾಪ್ಲರ್ ಪರಿಣಾಮ – ಆಕರ ಮತ್ತು ವೀಕ್ಷಕನ ನಡುವಿನ ಸಾಪೇಕ್ಷ ( ತುಲನಾತ್ಮಕ) ಚಲನೆಯಿಂದಾಗಿ ಒಂದು ಅಲೆಯ ಆವರ್ತನದಲ್ಲಿ ಇರುವುದೆಂದು ಭಾಸವಾಗುವ ಬದಲಾವಣೆ.
ಉತ್ತೇಜಕ – ಒಂದು ಅರೆವಾಹಕದ ವಾಹಕತ್ವವನ್ನು ಹೆಚ್ಚಿಸಲು ಅದಕ್ಕೆ ಸೇರಿಸುವ ಕಲ್ಮಷ ಪದಾರ್ಥ.
ವಿದ್ಯುದಂಶ ದಾನಿ – ಒಂದು ಅರೆವಾಹಕಕ್ಕೆ ವಿದ್ಯುದಂಶ ವಾಹಕಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸೇರಿಸಿದ ಕಲ್ಮಷ ಪದಾರ್ಥ.
ಪ್ರಧಾನ ಅಲೆ – ಒಂದು ಏಕವಾಹಕದಿಂದ ಮಾಡಲಾದ ಕೊಳವೆಯಲ್ಲಿ ಅತ್ಯಂತ ಕಡಿಮೆ ಆವರ್ತನ ಕಡಿತ ಬಿಂದು ( ಶಕ್ತಿಯು ಕಡಿಮೆಯಾಗಲು ಪ್ರಾರಂಭವಾಗುವ ಬಿಂದು) ವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆ.
ಕಾಂತಪ್ರದೇಶ – ಅಯಸ್ಕಾಂತಗುಣೀ ವಸ್ತುವಿನಲ್ಲಿ ಎಲ್ಲ ಪರಮಾಣುಗಳ ಕಾಂತಕ್ಷೇತ್ರಗಳೂ ಒಂದೇ ದಿಕ್ಕಿನಲ್ಲಿ ಸ್ಥಿತಗೊಂಡಿರುವ ಪ್ರದೇಶ.
ದಿಕ್ಬದಲನಾ ಮಸೂರ – ಸಮಾನಾಂತರವಾಗಿರುವ ಬೆಳಕಿನ ಕಿರಣಗಳ ದಿಕ್ಕನ್ನು ಬೇರೆಬೇರೆಯಾಗಿಸುವ ಮಸೂರ. ಇದು ಮಧ್ಯದಲ್ಲಿ ತಗ್ಗಿದ್ದು ತುದಿಗಳಲ್ಲಿ ಉಬ್ಬಿರುತ್ತದೆ.
ವಿರೂಪಗೊಳಿಸುವಿಕೆ – ತನಗೆ ದತ್ತವಾದದ್ದರ ಗುಣಲಕ್ಷಣಗಳನ್ನು ಅವು ಇದ್ದಂತೆಯೇ ಮರುಉತ್ಪಾದಿಸುವಲ್ಲಿ ವ್ಯವಸ್ಥೆಯು ವಿಫಲಗೊಳ್ಳುವ ಸ್ಥಿತಿ.
ಅಪಸ್ವರ – ಸಂಗೀತದಲ್ಲಿ ಕೆಲವು ಸ್ವರಗಳನ್ನು ಒಟ್ಟಿಗೆ ನುಡಿಸಿದಾಗ ಉಂಟಾಗುವ, ಕಿವಿಗೆ ಕರ್ಕಶವಾಗಿ ಕೇಳಿಸುವಂತಹ ಸ್ವರಮಿಶ್ರಣ.
ಚದುರಿದ ಅವಸ್ಥೆ – ಕಲಿಲಗಳಲ್ಲಿ ಅಂದರೆ ಪರಸ್ಪರ ಕರಗದ ವಸ್ತುಗಳ ಮಿಶ್ರಣದಲ್ಲಿ ಚದುರಿದ ಸ್ಥಿತಿಯಲ್ಲಿರುವ ವಸ್ತುವಿನ ರೂಪ ಅಥವಾ ಅವಸ್ಥೆ.