ಗೈರೋಸ್ಟ್ಯಾಟ್ ಆರ್ ಗೈರೋಸ್ಟೆಬಿಲೈಝರ್ – ಭ್ರಮಣ ಸಂಸ್ಥಾಪಕ ಅಥವಾ ಸುತ್ತು ಸ್ಥಿತಿಸ್ಥಾಪಕ – ತುಸು ಪರಿವರ್ತನೆ ಮಾಡಲ್ಪಟ್ಟ ಒಂದು ಭ್ರಮಣ ದರ್ಶಕ ಇದು. ಇದರಲ್ಲಿ, ತಿರುಗುತ್ತಿರುವ ಚಕ್ರವನ್ನು ಒಂದು ಗಟ್ಟಿಯಾದ, ಅಲ್ಲಾಡದ ಆವರಣದಲ್ಲಿ ಊರಿರುತ್ತಾರೆ. ಅಕ್ಷವು ಒಂದೇ ಸಮನಾಗಿ ಇದ್ದಲ್ಲೇ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಇದನ್ನು ಬಳಸುತ್ತಾರೆ.
ಗೈರೋಸ್ಕೋಪ್ – ಭ್ರಮಣ ದರ್ಶಕ – ತುಂಬ ವೇಗವಾಗಿ ಸುತ್ತುತ್ತಿರುವ ಚಕ್ರ ಅಥವಾ ಸುತ್ತ ಸುತ್ತುತ್ತಿರುವ ಬೆಳಕಿನ ಪುಂಜವನ್ನು ಹೊಂದಿರುವ ಒಂದು ಉಪಕರಣ. ಒಂದು ವಸ್ತುವು ತಾನು ಇರಬೇಕಾದ ದಿಕ್ಕಿನಿಂದ ಬೇರೆ ಕಡೆಗೆ ಸರಿದದ್ದನ್ನು ಪತ್ತೆ ಹಚ್ಚಲು ಈ ಉಪಕರಣವನ್ನು ಬಳಸುತ್ತಾರೆ.
ಗೈರೋಮ್ಯಾಗ್ನೆಟಿಕ್ ರೇಶ್ಯೋ – ಭ್ರಮಣ ಕಾಂತೀಯ ಅನುಪಾತ – ಒಂದು ಪರಮಾಣು ಅಥವಾ ಬೀಜಕೇಂದ್ರದ ಕಾಂತೀಯ ಸಾಮರ್ಥ್ಯ ಹಾಗೂ ಅದರ ಕೋನೀಯ ದ್ರವ್ಯವೇಗ (ಯಾಂಗುಲಾರ್ ಮೊಮೆಂಟಮ್)ಗಳಿಗಿರುವ ಅನುಪಾತ.
ಗೈರೋಮ್ಯಾಗ್ನೆಟಿಕ್ ಎಫೆಕ್ಟ್ಸ್ – ಭ್ರಮಣ ಕಾಂತೀಯ ಪರಿಣಾಮಗಳು – ಒಂದು ವಸ್ತುವಿನ ಕಾಂತೀಕರಣಕ್ಕೂ ಅದರ ಭ್ರಮಣಕ್ಕೂ (ಸುತ್ತುವಿಕೆಗೂ) ಇರುವ ಸಂಬಂಧದ ಗಮನಿಕೆ.
ಗೈಡೆಡ್ ಮಿಸೈಲ್ – ನಿರ್ದೇಶಿತ ಕ್ಷಿಪಣಿ – ಒಂದೋ ಪೂರ್ವನಿಶ್ಚಿತ ಅಥವಾ ತನ್ನೊಳಗಿನ ಸ್ವಯಂ ಪ್ರತಿಕ್ರಯಿಸುವ ಉಪಕರಣಗಳಿಂದಾಗಿ ಅಥವಾ ರೇಡಿಯೋ (ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ) ಆದೇಶಗಳಿಂದ ತನ್ನ ಗುರಿಯ ಕಡೆಗೆ ನಿರ್ದೇಶಿತಗೊಂಡ ಕ್ಷಿಪಣಿ.