ಹ್ಯಾಲೀಸ್ ಕಾಮೆಟ್ – ಹ್ಯಾಲೀ ಧೂಮಕೇತು – ಹದಿನೆಂಟನೆಯ ಶತಮಾನದಲ್ಲಿ ದ್ದ ಎಡ್ಮಂಡ್ ಹ್ಯಾಲಿ ಎಂಬ, ಇಂಗ್ಲಿಷ್ ಖಗೋಳ ಶಾಸ್ತ್ರಜ್ಞರು 1705 ರಲ್ಲಿ ಕಂಡುಹಿಡಿದ, 76 ವರ್ಷಗಳ ಭ್ರಮಣ ಕಾಲಾವಧಿ ಇರುವ ಒಂದು ಪ್ರಕಾಶಮಾನವಾದ ಧೂಮಕೇತು. 1910 ಮತ್ತು 1986 ರಲ್ಲಿ ಇದು ಬಂದಿತ್ತು. ಗ್ರಹಗಳು ಸೂರ್ಯನ ಸುತ್ತ ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಈ ಧೂಮಕೇತು ಸುತ್ತುತ್ತದೆ.
ಹಾಲ್ ಎಫೆಕ್ಟ್ – ಹಾಲ್ ಪರಿಣಾಮ - ಅಡ್ಡಡ್ಡವಾಗಿರುವ ಬಲವಾದ ಕಾಂತಕ್ಷೇತ್ರ ಇರುವಾಗ ಒಂದು ವಾಹಕ ಅಥವಾ ಅರೆವಾಹಕದಲ್ಲಿ ವಿದ್ಯುತ್ ಕಾಂತೀಯ ಬಲವು ಉತ್ಪತ್ತಿ ಆಗುವುದು. ಇದನ್ನು ಕಂಡುಹಿಡಿದ ವಿಜ್ಞಾನಿ – ಎಡ್ವಿನ್ ಹರ್ಬರ್ಟ್ ಹಾಲ್(1855-1938) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞ.
ಅರ್ಧ ಅಗಲ – ಒಂದು ವರ್ಣಪಟಲ ರೇಖೆಯ ಅಗಲದ ಅರ್ಧ ಅಥವಾ ಕೆಲವು ಸಂದರ್ಭಗಳಲ್ಲಿ, ಅದರ ಪೂರ್ತಿ ಅಗಲವನ್ನು ಅರ್ಧ ಎತ್ತರದಲ್ಲಿ ಅಳೆಯುವಂಥದ್ದು.
ಹಾಫ್ ವೇವ್ ರೆಕ್ಟಿಫೈಯರ್ – ಅರ್ಧ ಅಲೆ ಏಕದಿಶಾಕಾರಕ – ವಿದ್ಯುತ್ತನ್ನು ಒಂದೇ ದಿಕ್ಕಿಗೆ ಹರಿಯುವಂತೆ ಮಾಡುವ ಉಪಕರಣ. ಇದು ವಿದ್ಯುತ್ ಅಲೆಯ ಅರ್ಧಭಾಗವನ್ನು ಮಾತ್ರ ಹರಿಯಲು ಬಿಟ್ಟು ಇನ್ನುಳಿದ ಅರ್ಧ ಭಾಗವನ್ನು ತಡೆಯುತ್ತದೆ.
ಹಾಫ್ ವೇವ್ ಪ್ಲೇಟ್ – ಅರ್ಧ ಅಲೆ ಫಲಕ – ಬೆಳಕಿನ ಧ್ರುವೀಕರಣದ ಸ್ಥಾನಾಂತರ ಮಾಡುವುದಕ್ಕಾಗಿ ಬಳಸುವಂತಹ ಒಂದು ತೆಳುವಾದ ಫಲಕ. ಇದನ್ನು ದುಪ್ಪಟ್ಟು ವಕ್ರೀಭವನ ಸಾಮರ್ಥ್ಯವುಳ್ಳ ವಸ್ತುವಿನಿಂದ ಮಾಡಿದ್ದು, ಇದರಲ್ಲಿ ಮೇಲ್ಮೈಗಳ ಸಮಾನಾಂತರ ಜೋಡಣೆ ಇರುತದೆ.
ಹಾಫ್ ಲೈಫ್ – ಅರ್ಧಾಯುಷ್ಯ- ಒಂದು ದತ್ತ ವಿಕಿರಣ ವಸ್ತುವಿನ ಒಟ್ಟು ಪ್ರಮಾಣದ ಅರ್ಧ ಭಾಗವು ವಿದಳನಗೊಳ್ಳಲು ಅವಶ್ಯಕವಾಗಿರುವ ಸಮಯ. ಒಂದು ವಸ್ತುವಿನ ಅರ್ಧಾಯುಷ್ಯವು ಎಷ್ಟು ಹೆಚ್ಚಿಸುತ್ತದೋ ಅದು ಅಷ್ಟು ಸ್ಥಿರವಾಗಿರುತ್ತದೆ.