ಪ್ರತಿ ಕನ್ನಡ ತರಗತಿಯಲ್ಲೂ ಒಂದು ಹೊಸ ಪದ ಹಾಗೂ ಕನ್ನಡ ಸೂಕ್ತಿ ಬರೆಸಿ ತರಗತಿ ಪ್ರಾರಂಭಿಸುವುದು ನನ್ನ ಅಭ್ಯಾಸ. ಇದರ ಭಾಗವಾಗಿ ಈಚೆಗೆ ಒಂದು ದಿನ ಮಹಾರಾಣಿ ಕಾಲೇಜಿನ ನನ್ನ ಒಂದು ತರಗತಿಯಲ್ಲಿ ‘ತೊಂಡಂಗಿ’ ಎಂಬ ಪದ ಬರೆದೆ. ಈ ಪದದ ಅರ್ಥ ಜಿರಳೆ ಎಂದು.
ಹೆಣ್ಣು ಮಕ್ಕಳು ಮಾತ್ರ ಇದ್ದ ಒಂದು ಪದವಿ ತರಗತಿ ಅದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಜಿರಳೆಯನ್ನು ನೋಡಿದರೆ ಅಸಹ್ಯ ಪಟ್ಟು ಮಾರು ದೂರ ಎಗರುತ್ತಾರಲ್ಲವೆ? ಅದನ್ನು ನೆನೆದು ನಾನು ತಮಾಷೆಗೆ “ನೋಡಿ ಮಕ್ಳೇ, ಈ ಪದ. ಇದು ನಿಮಗೆ ತುಂಬ ಇಷ್ಟವಾಗುವಂಥದ್ದು. ಇದರ ಅರ್ಥ ಏನು ಹೇಳಿ ನೋಡೋಣ?” ಎಂದೆ. ಒಬ್ಬ ಉತ್ಸಾಹಿ ಹುಡುಗಿ “ಹಾಂ…ಗೊತ್ತು ಮೇಡಂ. ತುಂಡಂಗಿ” ಅಂದಳು. Short dress/ ತುಂಡು ಲಂಗ, ತುಂಡು ಅಂಗಿ ಅನ್ನುವ ಆಧುನಿಕ ಉಡುಪು ಎಂಬ ಅರ್ಥದಲ್ಲಿ ಹಾಗೆ ಹೇಳಿದ್ದಳು ಅವಳು. ನಗು ಬಂತು ನನಗೆ. “ಅಯ್ಯೋ, ಅದು ತುಂಡಂಗಿ ಅಲ್ಲ ಮಗು. ತೊಂಡಂಗಿ. ತೊಂಡಂಗಿ ಅಂದ್ರೆ ಜಿರಳೆ” ಅಂದೆ. ಅವಳೂ ಸೇರಿದಂತೆ ಎಲ್ಲ ಮಕ್ಕಳೂ “ಓ..ಛೀ…ಅಯ್ಯೋ..ಜಿರ್ಳೆ…!!!” ಎಂಬ ಬೇರೆ ಬೇರೆ ಪದಗಳನ್ನು ಉಚ್ಚರಿಸುತ್ತಾ ಮುಖ ಹಿಂಡಿಕೊಳ್ಳುತ್ತಾ ನಗಲಾರಂಭಿಸಿದರು. ಸಾಮಾನ್ಯವಾಗಿ ಗಂಭೀರವಾಗಿರುವ ತರಗತಿಗಳ ಒಂದು ಹಗುರ ಕ್ಷಣವಾಗಿ ಪರಿಣಮಿಸಿತು ಆ ಸಂದರ್ಭ. ಆ ನಗೆಯ ನಡುವೆಯೇ “ನೋಡಿ, ಒತ್ತು ಕೊಂಬು ನೋಡಿಕೊಳ್ಳದೆ ಉಚ್ಚರಿಸಿದ್ರೆ ಎಂತೆಂತಹ ಅಪಾರ್ಥಗಳಾಗ್ತವೆ! “ಎಂಬ ಅಧ್ಯಾಪಕ- ಟಿಪ್ಪಣಿ ಹೇಳುವುದನ್ನು ಮರೆಯಲಿಲ್ಲ ನಾನು! “ಅಯ್ಯೋ…. ಈ ಮೇಡಂ ಅಂತೂ ಯಾವತ್ತೂ ತಪ್ಪು ತಿದ್ದದೆ ಬಿಡೋದೇ ಇಲ್ಲಪ್ಪ!” ಅಂದುಕೊಂಡ್ರೇನೋ ಮಕ್ಕಳು. ಏನು ಮಾಡೋಣ ಹೇಳಿ!….ಅಧ್ಯಾಪಕರ ತಿದ್ದುವ ಅಭ್ಯಾಸವೂ ತೊಂಡಂಗಿಯಂತೆ ತುಂಬ ಪ್ರಾಚೀನ ಹಾಗೂ ಶಾಶ್ವತ!
Like us!
Follow us!