ಪ್ರಸ್ನೆಲ್ – ಫ್ರೆಸ್ನೆಲ್ – ಆವರ್ತನದ ಒಂದು ಮೂಲಮಾನ ಇದು. 1000000000000 ಹರ್ಟ್ಝ್ ಗೆ ಸಮ ಹಾಗೂ ಒಂದು ಟೆರಾ ಹರ್ಟ್ಝ್ ಗೆ ಸಮ. ಇದು ಎ.ಜೆ.ಫ್ರೆಸ್ನೆಲ್ ( 1788-1827) ಎಂಬ ಫ್ರೆಂಚ್ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು .
ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.
ಫ್ಲೈ ವ್ಹೀಲ್ – ಗತಿದಾಯಿ ಚಕ್ರ ಅಥವಾ ಮುಖ್ಯ ಚಕ್ರ – ಯಂತ್ರೋಪಕರಣಗಳಲ್ಲಿ ಶಕ್ತಿ ಸಂರಕ್ಷಕ ಉಪಕರಣವಾಗಿ ಬಳಸುವ ಒಂದು ದೊಡ್ಡ ಚಕ್ರ ಇದು.
ಫ್ಲಕ್ಸ್ ಮೀಟರ್ – ಬಲರೇಖಾ ಮಾಪಕ – ಕಾಂತೀಯ ಬಲರೇಖೆಗಳನ್ನು ಅಳೆಯಲು ಬಳಸುವ ಉಪಕರಣ. ಗ್ಯಾಲ್ವನೋಮೀಟರ್ ಹಾಗೂ ಲೋಹದ ಒಂದು ಸುರುಳಿಯನ್ನು ಬಳಸಿ ಇದನ್ನು ತಯಾರು ಮಾಡಿರುತ್ತಾರೆ.
ಫ್ಲಕ್ಸ್ ಡೆನ್ಸಿಟಿ (ಮ್ಯಾಗ್ನೆಟಿಕ್) – (ಕಾಂತೀಯ) ಬಲರೇಖಾ ಸಾಂದ್ರತೆ – ಒಂದು ಬಿಂದುವಿನಲ್ಲಿ ಏಕ ಘಟಕ ವಿಸ್ತೀರ್ಣದಲ್ಲಿರುವ ಕಾಂತೀಯ ರೇಖೆಗಳು.
ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ ಗತಿ.
2. ಕ್ಷೇತ್ರದಲ್ಲಿನ ಬಲದ ರೇಖೆಗಳ ಸಂಖ್ಯೆ.
ಫ್ಲೂಟ್ – ಒಂದು ಸಂಗೀತವಾದ್ಯ: ಒಂದು ಕೊಳವೆಯುದ್ದಕ್ಕೂ ಆರು ರಂಧ್ರಗಳನ್ನು ಮಾಡಿರುತ್ತಾರೆ. ಇದರ ಒಂದು ತುದಿಯಲ್ಲಿರುವ ಬಾಯಿಯಲ್ಲಿ ಊದಿದ ಗಾಳಿಯು ಕಂಪನಕ್ಕೆ ಒಳಗಾಗುತ್ತದೆ. ಇದರ ರಂಧ್ರಗಳ ಮೇಲೆ ಬೆರಳುಗಳನ್ನು ಬೇರೆ ಬೇರೆ ಸಂಯೋಜನೆಯಲ್ಲಿ ಇಟ್ಟು ತೆರೆದು ಮಾಡಿದಾಗ ಬೇರೆ ಬೇರೆ ಸ್ವರಗಳು ಹುಟ್ಟುತ್ತವೆ.
ಫ್ಲೂರೋಸ್ಕೋಪ್ – ಬಹಿರ್ ಪ್ರಕಾಶದರ್ಶಕ – ಸೂಕ್ತವಾದ ರೀತಿಯಲ್ಲಿ ಏರಿಸಲ್ಪಟ್ಟ ಬಹಿರ್ ಪ್ರಕಾಶ ಪರದೆಯನ್ನು ಹೊಂದಿರುವ ಒಂದು ಉಪಕರಣ. ಇದರಲ್ಕಿ ಕ್ಷ-ಕಿರಣ ಕೊಳವೆಯನ್ನು ಸಹ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಪರದೆ ಮತ್ತು ಕ್ಷ-ಕಿರಣ ಕೊಳವೆಗಳ ನಡುವೆ ಇಟ್ಟ ವಸ್ತುವಿನ ಕ್ಷ-ಕಿರಣ ನೆರಳಿನ ದೃಗ್ಗೋಚರ ಬಿಂಬವು ಪರದೆಯಲ್ಲಿ ಕಾಣಿಸುತ್ತದೆ.
ಪ್ಲೋರೋಸೆಂಟ್ ಲ್ಯಾಂಪ್ – ಬಹಿರ್ ಪ್ರಕಾಶ ಬೀರುವ ವಸ್ತುವೊಂದನ್ನು ಒಂದು ಗಾಜಿನ ಕೊಳವೆಯ ಒಳಭಾಗಕ್ಕೆ ಹೆಚ್ಚಿದ್ದು, ಇದು ಬೆಳಕಿನ ಆಕರದಂತೆ ಕೆಲಸ ಮಾಡುವ ವ್ಯವಸ್ಥೆ.
ಫ್ಲೋರೋಸೆನ್ಸ್ – ಬಹಿರ್ ಪ್ರಕಾಶ – ಕೆಲವು ವಸ್ತುಗಳು ಒಂದು ತರಂಗಾಂತರದ ಬೆಳಕನ್ನು ಹೀರಿಕೊಂಡು ಇನ್ನೊಂದು ತರಂಗಾಂತರದ ಬೆಳಕನ್ನು ಹೊರಚೆಲ್ಲುತ್ತವೆ. ಇದು ಒಂದು ರೀತಿಯ ಸ್ವಯಂಪ್ರಕಾಶವಾಗಿರುತ್ತದೆ.