ಹೈಪರ್ ಮೆಟ್ರೋಪಿಯಾ (ಹೈಪರೋಪಿಯಾ) – ದೂರದೃಷ್ಟಿ ದೋಷ – ಒಂದು ದೃಷ್ಟಿದೋಷ. ಇದರಲ್ಲಿ ಅಕ್ಷಿಪಟಲದ ಮೇಲೆ ಹತ್ತಿರದ ವಸ್ತುಗಳ ಬಿಂಬವು ಸರಿಯಗಿ ಬೀಳದಿರುವುದರಿಂದ ಅವು ಸರಿಯಾಗಿ ಕಾಣುವುದಿಲ್ಲ. ಉಬ್ಬುಮಸೂರ ( ಕಾನ್ವೆಕ್ಸ್ ಲೆನ್ಸ್) ಇರುವ ಕನ್ನಡಕವನ್ನು ಹಾಕಿಕೊಂಡು ಈ ದೋಷವನ್ನು ಸರಿಪಡಿಸಬೇಕು.
ಹೈಪರ್ ಫೈನ್ ಸ್ಟ್ರಕ್ಚರ್ – ಅತಿ ಸೂಕ್ಷ್ಮ ರಚನೆ – ವರ್ಣಪಟಲದ ಗೆರೆ ಅಥವಾ ಪಟ್ಟಿಯಲ್ಲಿ, ಪರಮಾಣುವಿನ ಶಕ್ತಿಮಟ್ಟವನ್ನು ಪರಮಾಣು ಬೀಜಕೇಂದ್ರವು ಪರಿಣಮಿಸಿದಾಗ ಉಂಟಾಗುವ ತುಂಬ ಸೂಕ್ಷ್ಮವಾದ ಗೆರೆಗಳು.
ಹೈಪರ್ ಛಾರ್ಜ್ – ಅತಿ ವಿದ್ಯುದಂಶ – ಬೇರಿಯಾನ್ಸ್ ಎಂಬ ಅಂತರ್ ಪರಮಾಣು ಅಂದರೆ ಪರಮಾಣುವಿನ ಒಳಗಿರುವ ಕಣಗಳ ಒಂದು ಗುಣಲಕ್ಷಣವನ್ನು ಹೇಳಲು ಬಳಸುವ ಪದ ಇದು. ಪರಮಾಣುಗಳ ಒಳಗೆ ಪ್ರಬಲ ಅಂತರ್ ಕ್ರಿಯೆಗಳು ಉಂಟಾಗುವ ಸಂದರ್ಭಗಳಲ್ಲಿ ಕೆಲವು ಸಲ ನಿರೀಕ್ಷಿತ ಒಡೆಯುವಿಕೆಗಳು ನಡೆಯದೆ ವಿಚಿತ್ರ ಪರಿಸ್ಥಿತಿ ನಿರ್ಮಾಣ ಆದಾಗ, ಅದನ್ನು ವಿವರಿಸಲು ಬಳಸುವ ಒಂದು ಪರಿಮಾಣಾತ್ಮಕ ( ಕ್ವಾಂಟೈಜ್ಡ್) ಗುಣಲಕ್ಷಣ. ಅತಿ ವಿದ್ಯುದಂಶವು ದುರ್ಬಲ ಅಂತರ್ ಕ್ರಿಯೆಗಳಲ್ಲಿ ವಿನಿಮಯಗೊಳ್ಳುವುದಿಲ್ಲ.
ಹೈಪರ್ ಬೋಲಾ – ಅತಿ ಪರವಲಯ – ತನ್ನ ವಿಕೇಂದ್ರಿಕತೆಯು ( eccentricity) ಒಂದಕ್ಕಿಂತ ಹೆಚ್ಚು ಇರುವಂತಹ ಶಂಕು.
ಹೈಪರ್ ಬಾಲಿಕ್ ಫಂಕ್ಷನ್ಸ್ – ಪರವಲಯಿತ ಗಣಿತವಾಕ್ಯಗಳು – Sin h, cos h ಮತ್ತು tan h – ಇವನ್ನೊಳಗೊಂಡ ಗಣಿತವಾಕ್ಯಗಳ ಕಟ್ಟು. ಇವು ತ್ರಿಕೋನಮಿತಿ ( ಟ್ರಿಗೋನೋಮೆಟ್ರಿ)ಯ ಗಣಿತವಾಕ್ಯಗಳಿಗೆ ಸಮನಾದ ಗುಣಲಕ್ಷಣಗಳನ್ನೇ ಹೊಂದಿರುತ್ತವೆ.
ಹೈಪರ್ – ಅತಿ, ಎತ್ತರದ, ಹೆಚ್ಚಿನ, ಅತೀತ – ಅತಿ, ಎತ್ತರದ, ಹೆಚ್ಚಿನ – ಈ ಅರ್ಥವುಳ್ಳ ಇಂಗ್ಲಿಷ್ ಪೂರ್ವಪದ ಇದು. ಉದಾಹರಣೆಗೆ, hypersonic ಅಂದರೆ ಅತಿಶಬ್ದದ, ಶಬ್ದಾತೀತ.
ಹೈಡ್ರೋಸ್ಟ್ಯಾಟಿಕ್ಸ್ – ವಿಶ್ರಾಂತ ದ್ರವಸ್ಥಿತಿ ವಿಜ್ಞಾನ – ವಿಶ್ರಾಂತಸ್ಥಿತಿಯಲ್ಲಿರುವ ದ್ರವಗಳ ಮುಖ್ಯವಾಗಿ ಕೆರೆಗಳು, ಅಣೆಕಟ್ಟುಗಳು, ದ್ರವತಡೆಗೋಡೆಗಳು ಮತ್ತು ಜಲ ಒತ್ತು ಯಂತ್ರಗಳಲ್ಲಿನ ದ್ರವಗಳ ಅಧ್ಯಯನ.
ಹೈಗ್ರೋಸ್ಕೋಪ್ – ತೇವಾಂಶ ದರ್ಶಕ – ವಾಯುವಿನಲ್ಲಿನ ಸಾಪೇಕ್ಷ ( ತುಲನೀಯ) ತೇವಾಂಶವನ್ನು ಸೂಚಿಸುವ ಉಪಕರಣ. ಇದರಲ್ಲಿ ಸಾಮಾನ್ಯವಾಗಿ ತೇವಾಂಶದ ಉಪಸ್ಥಿತಿಯಲ್ಲಿ ತನ್ನ ಬಣ್ಣವನ್ನು ಬದಲಾಯಿಸುವ ವಸ್ತುವನ್ನು ಬಳಸುತ್ತಾರೆ.