ಹೋಲೋಗ್ರಾಂ – (ಮೂರು ಆಯಾಮಗಳ) ಪೂರ್ಣಚಿತ್ರ ದಾಖಲೆ – ಪೂರ್ಣಚಿತ್ರ ಗ್ರಹಣದಲ್ಲಿ ಮೂರು ಆಯಾಮಗಳ ಬಿಂಬವನ್ನು ಪುನರುತ್ಪತ್ತಿ ಮಾಡುವಾಗ ಬಳಸುವ ಒಂದು ಛಾಯಾಚಿತ್ರ ದಾಖಲೆ.
ಹೋಲ್ – ರಂಧ್ರ – ಒಂದು ಘನವಸ್ತುವಿನ ಕಿಂಡಿ ಚೌಕಟ್ಟಿನ (ಲ್ಯಾಟಿಸ್) ರಚನೆಯಲ್ಲಿ ಎಲೆಕ್ಟ್ರಾನೊಂದು ಇದ್ದು, ಈಗ ಖಾಲಿಯಾಗಿರುವ ಜಾಗ. ರಂಧ್ರವು ಒಂದು ‘ಸಂಚಾರಿ- ಧನಾತ್ಮಕ – ವಿದ್ಯುದಂಶ-ಒಯ್ಯಕ’ ದಂತೆ ಕೆಲಸ ಮಾಡುತ್ತದೆ.
ಹೋಡೋಸ್ಕೋಪ್ – ಗಮನ ಗ್ರಾಹಕ – ವಿದ್ಯುದಂಶ ಹೊಂದಿರುವ ( ಸಾಮಾನ್ಯವಾಗಿ ವಿಶ್ವಾತ್ಮಕ ಕಿರಣಗಳ) ಕಣಗಳ ಪಥವನ್ನು ಗೊತ್ತು ಮಾಡುವ ( ಅವುಗಳ ಜಾಡು ಹಿಡಿಯುವ) ಉಪಕರಣ.
ಹೈ ಟೆನ್ಶನ್ ( HT) – ಉಚ್ಚ ವಿದ್ಯುದೊತ್ತಡ/ ಉಚ್ಚ ವಿದ್ಯುತ್ ಸಾಮರ್ಥ್ಯ ವ್ಯತ್ಯಾಸ ಅಥವಾ ಹೈ ವೋಲ್ಟೇಜ್ – ನೂರು ವೋಲ್ಟ್ ಗಳು ಅಥವಾ ಅದಕ್ಕಿಂತ ಹೆಚ್ಚಿರುವ ವಿದ್ಯುತ್ ಸಾಮರ್ಥ್ಯ ವ್ಯತ್ಯಾಸ.
ಹೈ ಸ್ಪೀಡ್ ಸ್ಟೀಲ್ – ಉಚ್ಚ ವೇಗದ ಉಕ್ಕು – ಮಬ್ಬುಕೆಂಪು ತಾಪ( ಡಲ್ ರೆಡ್ ಹೀಟ್) ದಲ್ಲೂ ತನ್ನ ಕಾಠಿಣ್ಯವನ್ನು ಉಳಿಸಿಕೊಳ್ಳುವಂತಹ ಉಕ್ಕು. ಟಂಗ್ಸ್ಟನ್, ಕ್ರೋಮಿಯಂ, ಇಂಗಾಲ, ವೆನೆಡಿಯಂ, ಮಾಲಿಬ್ಡಿನಮ್ ಮತ್ತು ಇನ್ನೂ ಕೆಲವು ಲೋಹಗಳನ್ನು ಸೇರಿಸಿ ಇದನ್ನು ತಯಾರಿಸುತ್ತಾರೆ.
ಹೈ ಫ್ರೀಕ್ವೆನ್ಸಿ(HF) – ಉಚ್ಚ ಆವರ್ತನ – 3-30 ಮೆಗಾ ಹರ್ಟ್ಝ್ ವರೆಗಿನ ಆವರ್ತನವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆಗಳು, ಅಂದರೆ ಇವುಗಳ ತರಂಗಾಂತರವು 10-100 ಮೀಟರ್ ಆಗಿರುತ್ತದೆ.
ಹ್ಯೂಸ್ಲರ್ ಅಲ್ಲಾಯ್ಸ್ – ಹ್ಯೂಸ್ಲರರ ಮಿಶ್ರಲೋಹಗಳು – ಯಾವುದೇ ಪ್ರಬಲ ಅಯಸ್ಕಾಂತ ಮೂಲವಸ್ತುಗಳು ಇಲ್ಲದ, ವಿಶೇಷ ರೀತಿಯ ಮಿಶ್ರಲೋಹಗಳು. ವಿವಿಧ ವಿದ್ಯುನ್ಮಾನ ಉಪಕರಣಗಳಿಗೆ ಸಂಬಂಧಿಸಿದಂತೆ ಬಹೂಪಯೋಗಿಯಾದ ಇವನ್ನು 20ನೇ ಶತಮಾನದ ಜರ್ಮನ್ ಗಣಿಯಂತ್ರಜ್ಞಾನಿ ಕಾನ್ರಾಡ್ ಹ್ಯೂಸ್ಲರ್ ರು ಕಂಡುಹಿಡಿದರು.